Wednesday, October 18, 2006

ಕನ್ನಡಕ್ಕಿನ್ನೊಂದು ಜ್ಞಾನಪೀಠ

ಪ್ರಶಸ್ತಿಗಳು - ಪ್ರತಿಭಾ ಪುರಸ್ಕಾರ
ಪ್ರಾಣಿವರ್ಗದಲ್ಲಿ ಮನುಷ್ಯನು ತನ್ನ ಬುದ್ಧಿಶಕ್ತಿಯ ಬಲದಿಂದ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾನೆ. ಮೆದುಳು, ಬೆನ್ನುಮೂಳೆಯಿಂದ ಕೂಡಿದ ವ್ಯವಸ್ಥಿತವಾದ ನರವ್ಯೂಹವು ಬುದ್ಧಿಬಲಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿದೆ. ಮೆದುಳಿನ ಎಡಭಾಗವು ಭಾವನಾ ಪ್ರಪಂಚಕ್ಕೆ ಸಂಬಂಧಿಸಿದ ಕಾರ್ಯಗಳನ್ನೂ, ಬಲಭಾಗವು ತಾರ್ಕಿಕ ನಿರ್ಣಯಗಳಿಗೆ ಸಂಬಂಧಿಸಿದ ವಿಷಯಗಳನ್ನೂ ಬಹುಮಟ್ಟಿಗೆ ನಿಯಂತ್ರಿಸುತ್ತವೆ.

ಭೌತವಿಜ್ಞಾನಿಗಳೂ, ತತ್ತ್ವಶಾಸ್ತ್ರಜ್ಞರೂ, ಪ್ರಕೃತಿಯ ಆಗುಹೋಗುಗಳನ್ನು ಗಮನಿಸಿ ಪ್ರಯೋಗಗಳ ಫಲಿತಾಂಶ ಮತ್ತು ತರ್ಕದ ಮೂಲಕ ಬಾಹ್ಯಜಗತ್ತಿನ ಹೆಚ್ಚಿನ ಅರಿವಿಗಾಗಿ ಪ್ರಯತ್ನಿಸುತ್ತಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ಶ್ರಮ ಕಡಿಮೆ ಮಾಡಿಕೊಳ್ಳಲು ನಾವು ಉಪಯೋಗಿಸುವ ಸಲಕರಣೆಗಳು, ಶರೀರದ ಪೋಷಣೆಗೆ ಬೇಕಾಗುವ ಆಹಾರ,ಔಷಧಿ ಮುಂತಾದವು ಇವರ ಪ್ರಯತ್ನಗಳ ಫಲ.

ಕಲೋಪಾಸಕರೂ ಸೌಂದರ್ಯ ಪ್ರಜ್ಞೆಯುಳ್ಳವರೂ ಆದ ಇನ್ನೊಂದು ವರ್ಗದ ಜನ ಜಗತ್ತಿನ ಅಂತರ್ಮುಖವನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ. ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ ಮುಂತಾದ ಲಲಿತಕಲೆಗಳು ಇವರ ಪ್ರಯತ್ನಗಳ ಫಲ. ಮನಸ್ಸಿಗೆ ಆನಂದವನ್ನು ಉಂಟುಮಾಡಿ, ಜೀವನಾಸಕ್ತಿಯನ್ನು ಮೂಡಿಸಲು ಇವರ ಕೆಲಸಗಳು ಫಲಕಾರಿಯಾಗಿವೆ.

ನಾಗರೀಕತೆಯ ಬೆಳವಣಿಗೆಗೆ ಈ ಎರಡೂ ಪ್ರವೃತ್ತಿಗಳೂ ಅವಶ್ಯ. ಈ ಕ್ಷೇತ್ರಗಳಲ್ಲಿ ಗಣನೀಯವಾದ ಕೊಡುಗೆ ಸಲ್ಲಿಸಿರುವವರನ್ನು, ಅವರ ಕೃತಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ. ಈ ಬಗೆಯ ಪ್ರಚಾರದಿಂದ ಅವು ಹೆಚ್ಚಿನ ಜನರನ್ನು ತಲುಪಿ, ಜನರು ಅವುಗಳ ಪ್ರಯೋಜನವನ್ನು ಮತ್ತು ಪ್ರೇರಣೆಯನ್ನು ಪಡೆಯಲು ಸಾಧ್ಯವಾಗುವದು.

ಹಿಂದೆ ಅರಸರು ತಮ್ಮ ಆಸ್ಥಾನಗಳಲ್ಲಿ ಇಂತಹವರನ್ನು ಪೋಷಿಸಿ ಬಿರುದು-ಬಾವಲಿಗಳಿಂದ ಸತ್ಕರಿಸಿ ಪ್ರೋತ್ಸಾಹಿಸುತ್ತಿದ್ದರು. ಪಂಡಿತರೊಡನೆ ವೇದಾಂತ ಸತ್ಯಗಳ ಕುರಿತು ನಡೆದ ವಾದ-ಸಂವಾದಗಳ ನಂತರ ಕಾಶ್ಮೀರದ ಸರ್ವಜ್ಞ ಪೀಠವನ್ನು ಆಚಾರ್ಯ ಶಂಕರರು ಏರಿದರೆಂದು ಅವರ ಜೀವನಕಥೆ ಹೇಳುತ್ತದೆ. ಪ್ರತಿವರ್ಷವೂ ಸಾಹಿತ್ಯ, ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯ ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ವಿಶ್ವಮಟ್ಟದಲ್ಲಿ ಗುರುತಿಸಿ ಸನ್ಮಾನಗೈಯುವ ನೋಬೆಲ್ ಪುರಸ್ಕಾರ ಎಲ್ಲರಿಗೂ ಪರಿಚಿತ. ಹಾಗೆಯೇ ಪದ್ಮ ಪ್ರಶಸ್ತಿಗಳು, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು, ವೀರ ಚಕ್ರಗಳು, ಫಿಲ್ಮಫೇರ್ ಪ್ರಶಸ್ತಿಗಳು ಮುಂತಾದವೆಲ್ಲ ವಿವಿಧ ಕ್ಷೇತ್ರಗಳಲ್ಲಿಯ ಸಾಧನೆಗಳನ್ನು-ಸಾಧಕರನ್ನು ಗುರುತಿಸಿ ಗೌರವಿಸುವ ಪ್ರಯತ್ನಗಳೇ ಆಗಿವೆ.

ಜ್ಞಾನಪೀಠ ಪ್ರಶಸ್ತಿ

ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಜ್ಞಾನಪೀಠವನ್ನು ಅತ್ಯುನ್ನತ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ. ಇದನ್ನು ಪ್ರತಿವರ್ಷವೂ ಖಾಸಗಿ ಸಂಸ್ಥೆಯಾದ ಜ್ಞಾನಪೀಠ ಟ್ರಸ್ಟ ೧೯೬೫ ರಿಂದ ಸಾಹಿತ್ಯಕ್ಷೇತ್ರದಲ್ಲಿ ಸೇವೆಸಲ್ಲಿಸಿದವರಿಗೆ ಕೊಡುತ್ತಿದೆ. ಈ ಟ್ರಸ್ಟನ್ನು ೧೯೪೪ ರಲ್ಲಿ ಶ್ರೀ ಶಾಂತಿ ಪ್ರಸಾದ ಜೈನ ಮತ್ತು ಶ್ರೀಮತಿ ರಮಾ ಜೈನ ದಂಪತಿಗಳು ಸಂಸ್ಕೃತ, ಪಾಳಿ, ಪ್ರಾಕೃತ ಭಾಷಾ ಸಾಹಿತ್ಯಗಳ ಅಭ್ಯಾಸ ಮತ್ತು ಪ್ರಕಟಣೆಯ ಉದ್ದೇಶದಿಂದ ಸ್ಥಾಪಿಸಿದರು. ಈಗ ಟೈಂಸ್ ಆಫ್ ಇಂಡಿಯಾ ಸಮೂಹ ಮಾಧ್ಯಮದ ಪಾಲುದಾರರಾದ ಜೈನ ಕುಟುಂಬದ ಸದಸ್ಯರು ಇದರ ಪ್ರಮುಖ ಸದಸ್ಯರಾಗಿದ್ದಾರೆ.

ಈ ಪ್ರಶಸ್ತಿಯನ್ನು ಪಡೆಯಲು ಸಾಹಿತಿಯು ಭಾರತದ ಪ್ರಜೆಯಾಗಿರಬೇಕು ಮತ್ತು ಸಂವಿಧಾನದ ೮ನೇ ಶೆಡ್ಯೂಲಿನಲ್ಲಿ ನಮೂದಾಗಿರುವ ಯಾವುದಾದರೊಂದು ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿರಬೇಕು. ಪ್ರಶಸ್ತಿಯು ಸರಸ್ವತಿ ವಾಗ್ದೇವಿಯ ಮೂರ್ತಿ, ಶಾಲು, ಶಂಖ, ಸಮ್ಮಾನಪತ್ರ ಮತ್ತು ೫ ಲಕ್ಷ ರೂಪಾಯಿಗಳ ಮೊತ್ತವನ್ನು ಒಳಗೊಂಡಿದೆ. ಶ್ರೇಷ್ಠ ಕೃತಿಗಾಗಿ ನೀಡುತ್ತಿದ್ದ ಈ ಪ್ರಶಸ್ತಿಯನ್ನು ೧೯೮೨ ರಿಂದೀಚಿಗೆ ಸಾಹಿತಿಯೊಬ್ಬರ ಸಮಗ್ರ ಕೊಡುಗೆಗಾಗಿಯೂ ಕೊಡಲಾಗುತ್ತಿದೆ. ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ.

ಮಲೆಯಾಳಿ ಸಾಹಿತಿ ಜಿ. ಶಂಕರ ಕುರುಪ ಅವರು ೧೯೬೫ ರಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮ ಒಡಕುಳಲ್ (ಕೊಳಲು) ಕೃತಿಗಾಗಿ ಪಡೆದರು. ಇದುವರೆಗೆ ೪೨ ಸಾಹಿತಿಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ೩ ಬಾರಿ ಇಬ್ಬರು ಸಾಹಿತಿಗಳು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅತ್ಯಂತ ಹೆಚ್ಚಿನಬಾರಿ ಅಂದರೆ ೭ ಬಾರಿ ಕನ್ನಡದ ಸಾಹಿತಿಗಳಿಗೆ ಈ ಗೌರವ ಪ್ರಾಪ್ತವಾಗಿದ್ದರೆ, ೬ ಬಾರಿ ಹಿಂದೀ ಸಾಹಿತಿಗಳಿಗೆ ಈ ಗೌರವ ಲಭಿಸಿದೆ.

ಜ್ಞಾನಪೀಠ ಪುರಸ್ಕೃತ ಕನ್ನಡಿಗರು

ಕನ್ನಡಕ್ಕೆ ಪ್ರಥಮ ಜ್ಞಾನಪೀಠ ದೊರಕಿದ್ದು ೧೯೬೭ ರಲ್ಲಿ, ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರ ಶ್ರೀರಾಮಾಯಣದರ್ಶನಂ (೧೯೫೫ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ), ಎಂಬ ಮಹಾಕಾವ್ಯಕ್ಕೆ. ವಾಲ್ಮೀಕಿಯ ಶ್ರೀಮದ್ರಾಮಾಯಣವನ್ನು ಆಧರಿಸಿ ಕನ್ನಡದಲ್ಲಿ ರಚಿಸಲ್ಪಟ್ಟಿದೆ. ಕೊಳಲು, ಅಗ್ನಿಹಂಸ, ಪ್ರೇಮಕಾಶ್ಮೀರ, ಪಕ್ಷಿಕಾಶಿ (ಎಲ್ಲ ಕವನ ಸಂಕಲನ), ಜಲಗಾರ, ಶೂದ್ರತಪಸ್ವಿ, ರಕ್ತಾಕ್ಷಿ (ನಾಟಕ), ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ (ಜೀವನ ಚರಿತ್ರೆ), ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು (ಕಾದಂಬರಿ), ರಸೋ ವೈ ಸಃ (ವಿಮರ್ಶೆ) ನೆನಪಿನ ದೋಣಿಯಲ್ಲಿ (ಆತ್ಮ ವೃತ್ತಾಂತ) ಇವರ ಪ್ರಮುಖ ಕೃತಿಗಳು. ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದ ಇವರು ಪದ್ಮಭೂಷಣ, ಪದ್ಮವಿಭೂಷಣ, ಪಂಪ ಪ್ರಶಸ್ತಿ ಪುರಸ್ಕೃತರು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಇವು ಕುವೆಂಪುರವರು ಬೋಧಿಸಿದ ಪಂಚಮಂತ್ರಗಳು.

೧೯೭೩ರ ಜ್ಞಾನಪೀಠವು ವರಕವಿ ದ. ರಾ. ಬೇಂದ್ರೆಯವರಿಗೆ ಅವರ ನಾಕುತಂತಿ ಕವನ ಸಂಕಲನಕ್ಕಾಗಿ ಲಭಿಸಿತು. ಗರಿ, ಅರಳು-ಮರಳು (೧೯೫೮ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ), ನಾದಲೀಲೆ, ಸಖೀಗೀತ, ಮತ್ತೆ ಬಂತು ಶ್ರಾವಣ ಇವರ ಇತರ ಕಾವ್ಯ ಸಂಕಲನಗಳು. ಸುಮಾರು ೧೪ ನಾಟಕ, ಕಥಾಸಂಕಲನಗಳು, ೨೯ ಕವನ ಸಂಕಲನಗಳು, ೫ ಮರಾಠಿ ಕೃತಿ ಮುಂತಾದವುಗಳನ್ನು ಇವರು ರಚಿಸಿದ್ದಾರೆ. ಉತ್ತರ ಕರ್ನಾಟಕದ ದೇಸಿ ಸೊಗಡು ಇವರ ಕೃತಿಗಳಲ್ಲಿ, ಭಾವಗೀತೆಗಳಲ್ಲಿ ಎದ್ದು ಕಾಣುತ್ತದೆ. ರಸವೇ ಜನನ, ವಿರಸ ಮರಣ, ಸಮರಸವೇ ಜೀವನ ಇದು ಅಂಬಿಕಾತನಯದತ್ತರ(ಬೇಂದ್ರೆ) ಜೀವನದೃಷ್ಟಿ.

ಡಾ. ಕೆ. ಶಿವರಾಮ ಕಾರಂತರಿಗೆ ೧೯೭೭ರಲ್ಲಿ ಅವರ ಮೂಕಜ್ಜಿಯ ಕನಸುಗಳು ಎಂಬ ಕಾದಂಬರಿಗೆ ಜ್ಞಾನಪೀಠವು ಲಭಿಸಿತು. ಇಲ್ಲಿಯ ಮೂಕಜ್ಜಿ ಒಂದು ವಸ್ತುವನ್ನು ಸ್ಪರ್ಶಿಸಿದ ಮಾತ್ರಕ್ಕೆ ಅದಕ್ಕೆ ಸಂಬಂಧಿಸಿದ ಜನ-ಜೀವನದ ಕುರಿತು ಮಾತನಾಡಬಲ್ಲ ಅಲೌಕಿಕ ಶಕ್ತಿಯುಳ್ಳವಳು. ಸೃಷ್ಠಿರಹಸ್ಯ, ಜನಜೀವನ ನಡೆದುಬಂದ ಬಗೆ, ಪುರಾತನರ ನಂಬಿಕೆ-ಅನುಭವಗಳ ಕುರಿತು ಅಜ್ಜಿ ಮತ್ತವಳ ಮೊಮ್ಮಗನ ನಡೆವ ಮಾತುಕತೆ ಕಾದಂಬರಿಯ ಕಥಾವಸ್ತು. ಬಹುಮುಖೀ ವ್ಯಕ್ತಿತ್ವದ ಕಾರಂತರು ಸಾಹಿತಿಗಳು, ಯಕ್ಷಗಾನ ಕಲಾವಿದರು, ಪರಿಸರವಾದಿ, ರಾಜಕೀಯ ಚಿಂತಕರು, ವಿಜ್ಞಾನ ಸಾಹಿತಿಗಳೂ ಆಗಿದ್ದರು. ಸುಮಾರು ೪೨ ಕಾದಂಬರಿ (ಪ್ರಮುಖವಾದವು - ಮರಳಿ ಮಣ್ಣಿಗೆ, ಚೋಮನ ದುಡಿ, ಬೆಟ್ಟದ ಜೀವ, ಅಳಿದಮೇಲೆ), ೩೧ ನಾಟಕಗಳು, ಯಕ್ಷಗಾನ-ಬಯಲಾಟ (೧೯೫೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಆತ್ಮಚರಿತ್ರೆ (ಹುಚ್ಚು ಮನಸ್ಸಿನ ಹತ್ತು ಮುಖಗಳು), ವಿಜ್ಞಾನ ವಿಶ್ವಕೋಶಗಳನ್ನು ಇವರು ರಚಿಸಿದರು.

೧೯೮೩ರ ಜ್ಞಾನಪೀಠವು ಮಾಸ್ತಿ ವೆಂಕಟೇಶಯ್ಯಂಗಾರರಿಗೆ ಅವರ ಚಿಕ್ಕವೀರ ರಾಜೇಂದ್ರ ಎಂಬ ಐತಿಹಾಸಿಕ ಕಾದಂಬರಿಗೆ ಲಭಿಸಿತು. ೧೮೩೪ರ ವರೆಗೂ ಕೊಡಗನ್ನು ಆಳಿದ ದೊರೆ ವೀರ ರಾಜೇಂದ್ರನ ಜೀವನ ಇದರ ಕಥಾವಸ್ತು. ಸುಮಾರು ೧೨೦ ಪುಸ್ತಕಗಳನ್ನು ರಚಿಸಿರುವ ಮಾಸ್ತಿಯವರ ಕೃತಿಗಳಲ್ಲಿ ಕೆಲವು - ಚೆನ್ನ ಬಸವನಾಯಕ, ಸುಬ್ಬಣ್ಣ, ಕಾಕನಕೋಟೆ ಮುಂತಾದವು. ಆದರೆ ಕನ್ನಡಕ್ಕೆ ಅವರ ಅತಿಮುಖ್ಯವಾದ ಕೊಡುಗೆಯೆಂದರೆ ಶ್ರೀನಿವಾಸ ಎಂಬ ನಾಮದಿಂದ ಅವರು ರಚಿಸಿದ ಸಣ್ಣಕಥೆಗಳು.

ವಿ. ಕೃ. ಗೋಕಾಕ(ವಿನಾಯಕ)ರಿಗೆ ೧೯೯೦ರಲ್ಲಿ ಅವರ ಭಾರತ ಸಿಂಧುರಶ್ಮಿ ಮಹಾಕಾವ್ಯಕ್ಕೆ ಜ್ಞಾನಪೀಠವು ಲಭಿಸಿತು. ವೇದಕಾಲೀನ ಭಾರತವನ್ನು - ಕ್ಷಾತ್ರಧರ್ಮ ಪರಿಪಾಲಕನಾಗಿದ್ದ ಕೌಶಿಕರಾಜನು ತನ್ನ ಅವಿರತವಾದ ಪ್ರಯತ್ನದಿಂದ ಮತ್ತು ಛಲದಿಂದ ಬ್ರಹ್ಮಜ್ಞಾನವನ್ನು ಪಡೆದು ಬ್ರಹ್ಮರ್ಷಿಯಾದುದನ್ನು ಕಥಾವಸ್ತುವನ್ನಾಗಿ ಹೊಂದಿದ ಈ ಮಹಾಕಾವ್ಯವು ೨೦ನೇ ಶತಮಾನದ ಅತ್ಯಂತ ದೀರ್ಘವಾದ ಮಹಾಕಾವ್ಯ. ನವೋದಯ ಪಂಥದ ಪ್ರಮುಖರಾದ ಇವರ ಇತರ ಕೃತಿಗಳು ಅಭ್ಯುದಯ, ಸಮುದ್ರ ಗೀತೆಗಳು, ದ್ಯಾವಾ-ಪೃಥಿವೀ (೧೯೬೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ) ಮುಂತಾದವು.

೧೯೯೪ರ ಜ್ಞಾನಪೀಠವು ಯು. ಆರ್. ಅನಂತಮೂರ್ತಿಯವರಿಗೆ ಸಮಗ್ರ ಕೃತಿಗಳಿಗಾಗಿ ಲಭಿಸಿತು. ಸಂಸ್ಕಾರ, ಭಾರತೀಪುರ, ಭವ, ಅವಸ್ಥೆ (ಕಾದಂಬರಿಗಳು), ಘಟಶ್ರಾದ್ಧ, ಮೌನಿ (ಕಥೆ) ಇವರ ಪ್ರಮುಖ ಕೃತಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಇವರು ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ.

ಗಿರೀಶ ಕಾರ್ನಾಡರಿಗೆ ೧೯೯೮ರಲ್ಲಿ ಅವರ ಸಮಗ್ರ ಕೃತಿಗಳಿಗಾಗಿ ಜ್ಞಾನಪೀಠವು ಲಭಿಸಿತು. ಯಯಾತಿ, ತಲೆದಂಡ (೧೯೯೪ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಮಾ ನಿಷಾದ, ಅಗ್ನಿ ಮತ್ತು ಮಳೆ, ತುಘಲಕ್, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಅವರ ನಾಟಕಗಳು. ಕಾರ್ನಾಡರು ಸ್ವತಃ ನಾಟಕ/ಸಿನೆಮಾಗಳನ್ನು ನಿರ್ದೇಶಿಸಿರುವರು ಮತ್ತು ನಟಿಸಿರುವರು. ಆದ್ದರಿಂದಲೇ ಬಹುಶಃ ಅವರ ನಾಟಕಗಳು ರಂಗಭೂಮಿ ಪ್ರದರ್ಶನಕ್ಕೆ ಅನುಕೂಲಕರವಾಗಿವೆ. ಇವರು ಪದ್ಮಶ್ರೀ ಮತ್ತು ಪದ್ಮಭೂಷಣ ಪುರಸ್ಕೃತರು.

ಮಾನ್ಯ ಡಿ. ವಿ. ಗುಂಡಪ್ಪನವರು ಕನ್ನಡಕ್ಕಾಗಿ ಸಲ್ಲಿಸಿದ ಸೇವೆ ಅಪಾರ. ನಾಟಕ, ಕಥೆ, ಜೀವನಚಿತ್ರಗಳು, ತತ್ತ್ವಸಾಹಿತ್ಯ, ಪತ್ರಿಕೆ, ಕಾವ್ಯ, ವೇದಾಂತ ಮೊದಲಾದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಅವರ ಕೃತಿಗಳನ್ನು ರಚಿಸಿರುವರು. ಅವರ ಶ್ರೀಮದ್ಭಗವದ್ಗೀತಾ ತಾತ್ಪರ್ಯ (ಜೀವನಧರ್ಮಯೋಗ) ಕೃತಿಗೆ ೧೯೬೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಆದರೆ ತನ್ನ ಕಾವ್ಯ ಮತ್ತು ತತ್ತ್ವಸೌಂದರ್ಯದಿಂದ, ಅರ್ಥಗಹನತೆಯಿಂದ ಅವರ ಮಂಕುತಿಮ್ಮನಕಗ್ಗ ಜನಪ್ರಿಯತೆಯನ್ನು ಪಡೆದಿದೆ. ೧೯೭೫ರಲ್ಲಿ ವಿಧಿವಶರಾದ ಡಿವಿಜಿಯವರಿಗೆ ಜ್ಞಾನಪೀಠವು ಲಭಿಸದೆ ಹೋದುದು ದುರ್ದೈವ.

ಕನ್ನಡದ ಮತ್ತೊಬ್ಬ ಹಿರಿಯಕವಿ, ನವೋದಯದ ರತ್ನತ್ರಯರಲ್ಲೊಬ್ಬರಾದ ಪು ತಿ ನರಸಿಂಹಾಚಾರ್ (ಇನ್ನಿಬ್ಬರು ಕುವೆಂಪು ಮತ್ತು ಬೇಂದ್ರೆ) ೧೯೬೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮ ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗಾಗಿ ಪಡೆದರು. ಅವರ ಮೇರುಕೃತಿ ಶ್ರೀಹರಿಚರಿತ ಮಹಾಕಾವ್ಯವು ಭಾಗವತದ ಅದರಲ್ಲೂ ಮುಖ್ಯವಾಗಿ ದಶಮಸ್ಕಂದವೆಂದು ಪ್ರಸಿದ್ಧವಾದ ಕೃಷ್ಣಕಥೆಯನ್ನು ಆಧರಿಸಿದೆ. ಗೀತರೂಪಕಗಳಾದ ಗೋಕುಲನಿರ್ಗಮನ, ಸೀತಾಪರಿಣಯ, ಶ್ರೀರಾಮಪಟ್ಟಾಭಿಷೇಕ ಅವರ ಇತರ ಕೃತಿಗಳು. ಅವರ ಅಕಾಲಮೃತ್ಯುವಿನಿಂದ ಜ್ಞಾನಪೀಠವು ಲಭಿಸದೆ ಹೋಯಿತು.

ಎಸ್. ಎಲ್. ಭೈರಪ್ಪ

ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಸಾಹಿತ್ಯವು ಅತ್ಯಂತ ಪ್ರಮುಖವೂ, ಜನಪ್ರಿಯವೂ ಆದ ಪ್ರಕಾರವಾಗಿದೆ. ಸಂಖ್ಯಾದೃಷ್ಟಿಯಿಂದಲೂ ಗುಣಮಟ್ಟದಲ್ಲೂ ಮತ್ತು ಕಥನ ಶೈಲಿಯಲ್ಲೂ ಕಾದಂಬರಿ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ಶ್ರೀ ಶಿವರಾಮ ಕಾರಂತ ಮತ್ತು ಶ್ರೀ ಎಸ್. ಎಲ್. ಭೈರಪ್ಪನವರಿಂದಾಗಿದೆ.

ವಿಭಿನ್ನವಾದ ಕಥಾತಂತ್ರಗಳ ಪ್ರಯೋಗ, ಪ್ರಭಾವಶಾಲಿಯಾದ ಪಾತ್ರಗಳು, ವಿಷಯ ವೈವಿಧ್ಯತೆ ಅತ್ತ ದೀರ್ಘವೂ ಅಲ್ಲದ ಇತ್ತ ತೀರ ಸಂಕ್ಷಿಪ್ತವೂ ಅಲ್ಲದ ಕಥೆ ಭೈರಪ್ಪನವರ ಕೃತಿಗಳಲ್ಲಿ ಕಂಡುಬರುವದು ಅವರ ಆಳವಾದ ಅಧ್ಯಯನದ, ಜೀವನಾನುಭವದ ಫಲಿತಾಂಶ. ಅವರ ಅಭಿಮಾನಿ ಓದುಗರಲ್ಲಿ ವಿದ್ಯಾರ್ಥಿಗಳಿದ್ದಾರೆ, ಗೃಹಿಣಿಯರಿದ್ದಾರೆ, ವೃತ್ತಿನಿರತ ವೈದ್ಯ, ವಕೀಲ, ಇಂಜಿನಿಯರುಗಳಿದ್ದಾರೆ.

ಅವರ ವಂಶವೃಕ್ಷ ಕೃತಿಗೆ ಕರ್ನಾಟಕ ರಾಜ್ಯ ಸರ್ಕಾರವು ತನ್ನ ೧೯೬೬-೬೭ರ ಸಾಲಿನ ಪ್ರಥಮ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನೀಡಿತು. ಈ ಕೃತಿಯನ್ನಾಧರಿಸಿದ ಚಲನಚಿತ್ರಕ್ಕಾಗಿ ನಿರ್ದೇಶಕ ಬಿ.ವಿ. ಕಾರಂತ/ಗಿರೀಶ ಕಾರ್ನಾಡರಿಗೆ ಪ್ರಶಸ್ತಿ ದೊರಕಿತು. ಹಲವಾರು ಊರುಗಳಲ್ಲಿ ಈ ಕೃತಿಯ ಕುರಿತು, ಪಾತ್ರಚಿತ್ರಣಗಳ ಕುರಿತು ಸಾರ್ವಜನಿಕ ಸಾಹಿತ್ಯ ಗೋಷ್ಟಿಗಳು ಏರ್ಪಟ್ಟವು. ೧೯೬೮ರಲ್ಲಿ ಪ್ರಕಟವಾದ ಅವರ ತಬ್ಬಲಿಯು ನೀನಾದೆ ಮಗನೆ ಕೃತಿಯನ್ನು ಆಧರಿಸಿ ತಯಾರಿಸಿದ ಚಲನಚಿತ್ರಕ್ಕೆ ಪ್ರಶಸ್ತಿ ಸಿಕ್ಕಿತು. ಇದು ಹಿಂದಿ ಭಾಷೆಯಲ್ಲಿ ಗೋಧೂಲಿ ಎಂಬ ಹೆಸರಿನಲ್ಲಿ ಚಲನಚಿತ್ರವಾಯಿತು. ಹಿಂದಿ ಕಾದಂಬರಿಯು ೫೦,೦೦೦ಕ್ಕೂ ಹೆಚ್ಚಿನ ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಇವರ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿತು. ಶ್ರೀ ಟಿ. ಎನ್ ಸೀತಾರಾಮ್ ಅವರು ಮತದಾನ ಕೃತಿಯನ್ನು ಆಧರಿಸಿ ಚಲನಚಿತ್ರ ಮಾಡಿದರು. ಇದಕ್ಕೆ ಪ್ರಶಸ್ತಿ ದೊರಕಿತು. ಗಿರೀಶ್ ಕಾಸರವಳ್ಳಿಯವರು ಗೃಹಭಂಗ ಕೃತಿಯನ್ನು ಯಶಸ್ವಿಯಾಗಿ ಕಿರುತೆರೆಯಲ್ಲಿ ಧಾರಾವಾಹಿಯ ರೂಪದಲ್ಲಿ ಪ್ರಸ್ತುತಪಡಿಸಿದರು. ೨೦೦೬ರ ಶ್ರೇಷ್ಠ ಚಲನಚಿತ್ರವೆಂದು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದಿರುವ ನಾಯಿ-ನೆರಳು ಚಿತ್ರವನ್ನು ಗಿರೀಶ್ ಕಾಸರವಳ್ಳಿಯವರು ಭೈರಪ್ಪನವರ ಇದೇ ಹೆಸರಿನ ಕೃತಿಯನ್ನು ಆಧರಿಸಿ ನಿರ್ಮಿಸಿದ್ದಾರೆ.

ಕೆಳಗಿನ ಕೋಷ್ಟಕದಲ್ಲಿ ಭೈರಪ್ಪನವರ ಕೃತಿಗಳನ್ನು ಪಟ್ಟಿಮಾಡಲಾಗಿದೆ

ಕ್ರ.ಸಂ.

ಕೃತಿಗಳು

ಪ್ರಕಟನೆಯ ವರ್ಷ

ಮರು ಮುದ್ರಣಗಳು

ಇತರ ಭಾಷೆಗಳಲ್ಲಿ

ಕಾದಂಬರಿಗಳು

ಧರ್ಮಶ್ರೀ

1961

9

ಸಂಸ್ಕೃತ, ಮರಾಠಿ

ದೂರಸರಿದರು

1962

8

-

ಮತದಾನ

1965

8

-

ವಂಶವೃಕ್ಷ

1965

8

ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ

ಜಲಪಾತ

1967

7

-

ನಾಯಿ-ನೆರಳು

1968

7

ಗುಜರಾತಿ, ಹಿಂದಿ

ತಬ್ಬಲಿಯು ನೀನಾದೆ ಮಗನೆ

1968

6

ಹಿಂದಿ

ಗೃಹಭಂಗ

1970

5

ಭಾರತದ ೧೪ ಭಾಷೆಗಳಿಗೆ

ನಿರಾಕರಣ

1971

6

-

೧೦

ಗ್ರಹಣ

1972

5

-

೧೧

ದಾಟು

1973

5

ಭಾರತದ ೧೪ ಭಾಷೆಗಳಿಗೆ

೧೨

ಅನ್ವೇಷಣೆ

1976

5

ಮರಾಠಿ, ಹಿಂದಿ

೧೩

ಪರ್ವ

1979

6

ಮರಾಠಿ, ಹಿಂದಿ, ಇಂಗ್ಲೀಷ, ತೆಲುಗು, ಬಂಗಾಳಿ

೧೪

ನೆಲೆ

1983

4

ಹಿಂದಿ

೧೫

ಸಾಕ್ಷಿ

1986

3

ಇಂಗ್ಲೀಷ

೧೬

ಅಂಚು

1990

3

ಮರಾಠಿ, ಹಿಂದಿ

೧೭

ತಂತು

1993

4

ಮರಾಠಿ, ಹಿಂದಿ

೧೮

ಸಾರ್ಥ

1998

3

ಮರಾಠಿ, ಹಿಂದಿ, ಇಂಗ್ಲೀಷ, ಸಂಸ್ಕೃತ

೧೯

ಮಂದ್ರ

2002

3

ಮರಾಠಿ, ಹಿಂದಿ

೨೦

ಭೀಮಕಾಯ

2005

2

-

ಆತ್ಮವೃತ್ತಾಂತ

೨೧

ಭಿತ್ತಿ

೧೯೯೬

ಮರಾಠಿ, ಹಿಂದಿ

ಸಾಹಿತ್ಯ ಚಿಂತನಾ ಗ್ರಂಥಗಳು

೨೨

ಸತ್ಯ ಮತ್ತು ಸೌಂದರ್ಯ

೧೯೬೬

ಇಂಗ್ಲೀಷ

೨೩

ಸಾಹಿತ್ಯ ಮತ್ತು ಪ್ರತೀಕ

೧೯೬೭

-

೨೪

ಕಥೆ ಮತ್ತು ಕಥಾವಸ್ತು

೧೯೬೯

-

೨೫

ನಾನೇಕೆ ಬರೆಯುತ್ತೇನೆ?

೧೯೮೦

ಮರಾಠಿ

ಸಂಪಾದನೆ

೨೬

ಗಂಗೂಬಾಯಿ ಹಾನಗಲ್

೧೯೮೮

-

೨೭

ಮಾನ

೧೯೯೨

-


ಅವರ ಅನೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡಿರುವುದರಿಂದ ಭೈರಪ್ಪನವರು ಕನ್ನಡೇತರ ಸಾಹಿತ್ಯಾಸಕ್ತರಲ್ಲೂ ಅತ್ಯಂತ ಜನಪ್ರಿಯರಾಗಿದ್ದಾರೆ. ಅವರ ಕೃತಿಗಳಲ್ಲಿ ಕಥಾವಸ್ತುವಿನ ವಿಷಯ ವೈವಿಧ್ಯತೆಯ ಬಗ್ಗೆ ಹಿಂದೆಯೇ ಪ್ರಸ್ತಾಪ ಮಾಡಲಾಗಿದೆ.

ತಬ್ಬಲಿಯು ನೀನಾದೆ ಮಗನೆ’’ಕೃಷಿಯಾಧಾರಿತ ಗ್ರಾಮೀಣ ಸಂಸ್ಕೃತಿ ಮತ್ತು ಕೈಗಾರಿಕೆ, ಉದ್ಯಮ ಆಧಾರಿತ ನಗರ ಸಂಸ್ಕೃತಿಗಳ ತಾಕಲಾಟ. ಒಂದು ನೆಮ್ಮದಿಯ ಜೀವನವನ್ನು ಇನ್ನೊಂದು ಸ್ಪರ್ಧೆಯನ್ನು ಪ್ರತೀಕಿಸುತ್ತವೆ. ಒಂದರಲ್ಲಿ ಸೃಜನ ಶಕ್ತಿಗೆ ವಿಪುಲ ಅವಕಾಶವಿದೆ, ಇನ್ನೊಂದರಲ್ಲಿ ಉತ್ಪಾದನೆ ಮೂಲಕ ಜನರ ಅವಶ್ಯಕತೆಗಳನ್ನು ಪೂರೈಸುವ ಭರವಸೆ ಇದೆ. ಪರಂಪರಾಗತ ನಂಬಿಕೆಗಳಲ್ಲಿ, ಜೀವನ ಶೈಲಿಯಲ್ಲಿ ವಿಶ್ವಾಸ ಇಟ್ಟ ಜನರು ಒಂದನ್ನು ಪ್ರತೀಕಿಸಿದರೆ, ಎಲ್ಲವನ್ನೂ ಪ್ರಶ್ನಿಸಿ ಕುತೂಹಲದಿಂದ ಪರೀಕ್ಷಿಸುವವರು ಇನ್ನೊಂದನ್ನು. ಇದು ಪೌರ್ವಾತ್ಯ ಭಾರತೀಯ ಸಂಸ್ಕೃತಿಯ ಮತ್ತು ಪಾಶ್ಚಾತ್ಯ/ಅಮೇರಿಕನ್ ಸಂಸ್ಕೃತಿಯ ತಾಕಲಾಟವೂ ಹೌದು. ಶತಮಾನಗಳಿಂದ ರೈತರಿಗೆ ಉಳಲು ಸಹಕರಿಸಿ, ಹಾಲನ್ನಿತ್ತು ಗೌರವವನ್ನೂ ಜನರ ಪ್ರೀತಿಯನ್ನೂ ಗಳಿಸಿ, ದೈವತ್ವದ ಪದವಿಗೇರಿದ ಗೋವು-ಗೋರಕ್ಷಣೆಯನ್ನು ಅತ್ಯಂತ ಪ್ರಭಾವೀ ಸಂಕೇತವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಕಥಾವಸ್ತುವಿಗಾಗಿ ಸಂಪ್ರದಾಯವಾದಿಗಳೆಂದು ಭೈರಪ್ಪನವರು ನಿಂದೆಗೆ ಗುರಿಯಾದುದು ಒಂದು ಸಂಗತಿಯಾದರೆ ಸೌಮ್ಯವಾದಿ(socialists)ಗಳು ಎಡಪಂಥೀಯ ವಿಚಾರವಾದಿಗಳೂ ಅವರ ಕೃತಿಗಳನ್ನು ಚಿತ್ರೀಕರಿಸಿ ಪ್ರಸಂಸೆಗೆ ಪಾತ್ರರಾದುದು ಇನ್ನೊಂದು ಸಂಗತಿ.

ಜಾತಿ ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ದಾಟು ವಿಶ್ಲೇಶಿಸುತ್ತದೆ. ಸಾಮಾಜಿಕ ಪ್ರತಿಷ್ಠೆಯನ್ನು ಪಡೆಯಲು ಹೇಗೆ ಪ್ರತಿ ಯೊಂದು ಜಾತಿಯವರೂ ತಾವು ಸಾಂಸ್ಕೃತಿಕವಾಗಿ ಇತರರಿಗಿಂತ ಶ್ರೇಷ್ಠ ಹಾಗೂ ವಿಭಿನ್ನರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿರುವರೆಂಬುದು ಕೃತಿಯಲ್ಲಿ ಮೂಡಿಬಂದಿದೆ. ಇಂದಿನ ಸಾಮಾಜಿಕ ಸತ್ಯವನ್ನೂ ನಿಜ ಪರಿಸ್ಥಿತಿಯನ್ನೂ ಆಧರಿಸಿದ ಕಥೆ ಇದಾಗಿದೆ.

ಮೇರುಕೃತಿ ಪರ್ವ ಮಹಾಭಾರತವನ್ನೂ ಅದರ ಪೌರಾಣಿಕ ಅತಿಮಾನವ ಸಂಗತಿಗಳಿಂದ ಪ್ರತ್ಯೇಕಿಸಿ ವೇದೋತ್ತರ ಕಾಲದ ಜನರ ಸಾಮಾಜಿಕ ಪದ್ಧತಿ, ಅವರ ರೀತಿ ರಿವಾಜಿಗಳ ಆಧಾರದ ಮೇಲೆ ಪುನಾರಚಿಸಿದ ಕಥೆ.

ಅಸ್ಮಿತೆ ಅಥವಾ ತನ್ನ ಉಳಿವಿಗಾಗಿ ಮಾನವನಲ್ಲಿ ಮೂಡುವ ಒಂದು ಸಾಂಸ್ಕೃತಿಕ ಪ್ರಜ್ಞೆ ವಂಶದ ಕುರಿತದ್ದು. ವಂಶವೃಕ್ಷದ ಶ್ರೀನಿವಾಸ ಶ್ರೋತ್ರಿಯ ಪಾತ್ರ ಭೈರಪ್ಪ ಚಿತ್ರಿಸಿರುವ ಉದಾತ್ತ ಮತ್ತು ಮೇರು ವ್ಯಕ್ತಿತ್ವಗಳಲ್ಲೊಂದು. ‘ತಂತು ಸ್ವಾತಂತ್ರ್ಯೋತ್ತರ ಭಾರತದ ದುರ್ಬಲವಾಗುತ್ತಿರುವ ಮತ್ತು ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಅಧಃಪತನಕ್ಕಿಳಿಯುತ್ತಿರುವ ನೈತಿಕ, ಸಾಮಾಜಿಕ, ರಾಜಕೀಯ ತಂತುಗಳನ್ನೂ ವೈಯ್ಯಕ್ತಿಕ ಮತ್ತು ಕೌಟುಂಬಿಕ ಸಾಮಜಿಕ ಮಟ್ಟದಲ್ಲಿ ಚಿತ್ರಿಸಿದರೆ, ಮತದಾನ ಚುನಾವಣೆಯ ನೆಪದಿಂದ ಹಳ್ಳಿಹಳ್ಳಿಗಳನ್ನೂ ವ್ಯಾಪಿಸಿರುವ ದ್ವೇಷಾಸೂಯೆ ಮತ್ತು ಸಾಮಾನ್ಯ ಜನರು ಅದರಿಂದ ಪಡುತ್ತಿರುವ ಕಷ್ಟ-ಕಾರ್ಪಣ್ಯಗಳ ಅರಿವನ್ನು ಮೂಡಿಸುತ್ತದೆ. ಸತ್ಯದ ನೆಲೆಗಾಗಿ ಹುಡುಕಾಟ ಸಾಕ್ಷಿಯಲ್ಲಿದೆ. ಮಾನವ ಸ್ವಭಾವಗಳನ್ನು ಪುನರ್ಜನ್ಮದ ಸಂಗತಿಯ ಮೂಲಕ ನಾಯಿ-ನೆರಳು ಕೃತಿಯಲ್ಲಿ ತಿಳಿಯುವ ಪ್ರಯತ್ನ ಮಾಡಲಾಗಿದೆ. ದೂರಸರಿದರು ಗಂಡು-ಹೆಣ್ಣು ಸಂಬಂಧದ ಕುರಿತು ಪರಸ್ಪರ ಪ್ರೀತಿ ಸುಖೀದಾಂಪತ್ಯಕ್ಕೆ ಕಾರಣ-ದೇಹಾಕರ್ಷಣೆಯೇ, ಬೌದ್ಧಿಕ ಸಾಹಚರ್ಯವೇ, ಸಮಾನ ಅಭಿರುಚಿಗಳೇ, ಗೌರವಾಭಿಮಾನ, ಅಂಧಃಶ್ರದ್ಧೆಗಳೇ ಅಥವಾ ಪರಸ್ಪರರನ್ನು ಅರಿತು ಬಾಳುವ ಮನೋಭಾವವೇ ಎಂಬುದನ್ನು ಪಾತ್ರಗಳ ಮೂಲಕ ತಿಳಿಸುತ್ತದೆ. ಕಲಾವಿದ ದಂಪತಿಗಳು ವಾಣಿಜ್ಯಾಧಾರಿತ ನಗರ ಜೀವನ ಮತ್ತು ಹಳ್ಳಿಯ ಸಣ್ಣ ಬುದ್ಧಿಯ ಜನರ ಮಧ್ಯೆ ಬಾಳಲು ಪ್ರಯತ್ನಿಸಿ ಪಡುವ ಸಂಕಷ್ಟಗಳನ್ನು ಜಲಪಾತವು ವಿವರಿಸುತ್ತದೆ. ಕಲಾಸರಸ್ವತಿಯ ವಿಶೇಷ ಕೃಪೆಗೊಳಗಾದ ಗಾಯಕನೊಬ್ಬ ನೈತಿಕ ಅಧಃಪತನವನ್ನು ಹೊಂದಿ, ಜನರ ತಿರಸ್ಕಾರಕ್ಕೊಳಗಾಗುವದು ಮಂದ್ರದಲ್ಲಿದೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಐತಿಹಾಸಿಕವಾಗಿ ಮತ್ತು ರಾಜಕೀಯದ ದೃಷ್ಟಿಯಿಂದ ಕೂಡ ಎಂಟನೆಯ ಶತಮಾನವು ಭಾರತದ ಚರಿತ್ರೆಯಲ್ಲಿ ಅತ್ಯಂತ ಘಟನಾಪೂರ್ಣ ಸಂಧಿಕಾಲ. ಸಾರ್ಥದ ಕಥೆ ಇಂತಹ ಪರಿಸರದಲ್ಲಿ ನಾಗಭಟ್ಟನೆಂಬ ವೈದಿಕನ ಕಥೆ ಹೇಳುತ್ತದೆ. ತನ್ನ ಸಾಹಸ ಪ್ರವೃತ್ತಿಯಿಂದ ದೇಶ-ಪ್ರದೇಶಗಳನ್ನು ಸುತ್ತುವ ಇವನು ತಾಂತ್ರಿಕ, ಬೌದ್ಧ, ಮೊಹಮ್ಮದೀಯರ ಎದುರಾಗುತ್ತಾನೆ. ಅವರ ನಂಬಿಕೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಅವನ ಅನುಭವಗಳನ್ನು ಸಾರ್ಥದಲ್ಲಿ ಬಹು ಸುಂದರವಾಗಿ ಚಿತ್ರಿಸಲಾಗಿದೆ.

ಭೈರಪ್ಪನವರಿಗೆ ಜ್ಞಾನಪೀಠ ಎಕಿಲ್ಲ ?

ಕನ್ನಡದಲ್ಲಿ ಅತೀಹೆಚ್ಚಿನ ಓದುಗರನ್ನು ಹೊಂದಿರುವ ಭೈರಪ್ಪನವರ ಕೃತಿಗಳ ಓದುಗರಿಗೆ ಎದುರಾಗುವ ಪ್ರಶ್ನೆಯೆಂದರೆ- ಅವರ ಮತ್ತು ಅವರ ಕೃತಿಗಳಿಗೆ ನ್ಯಾಯವಾಗಿ ಒದಗಬೇಕಾಗಿದ್ದ ಪ್ರಚಾರ ಮತ್ತು ಮಾನ್ಯತೆ ಏಕೆ ದೊರೆತಿಲ್ಲ ಎಂಬುದು.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿಯು ಏಕೆ ದೊರೆತಿಲ್ಲ ಎಂಬುದು. ಪತ್ರಿಕೆಗಳಲ್ಲಿ ಮೇಲಿಂದ ಮೇಲೆ ಇತರ ಜ್ಞಾನಪೀಠ ಪುರಸ್ಕೃತರ, ಬುದ್ಧಿಜೀವಿಗಳ ಹೇಳಿಕೆ, ಲೇಖನಗಳು, ವರದಿಗಳು ಪ್ರಕಟವಾದರೂ ಭೈರಪ್ಪನವರ ಕುರಿತಾಗಿ ಏನೂ ಪ್ರಕಟವಾಗದಿರಲು ಕಾರಣವೇನು? ಸಮಕಾಲೀನ ಕನ್ನಡದ ಕುರಿತಾದ ಪ್ರೌಢಲೇಖನಗಳಲ್ಲಿ ಕೂಡ ನವೋದಯ, ನವ್ಯ, ದಲಿತ, ಬಂಡಾಯ ಕುರಿತಾದ ಪಂಥಗಳ ಬಗ್ಗೆ, ಕವಿ-ಕೃತಿಗಳ ಬಗ್ಗೆ ಸಾಕಷ್ಟು ಪ್ರಸ್ತಾಪವಿದ್ದರೂ ಯಾವದೇ ಪಂಥಕ್ಕೆ ಸೇರದ ಭೈರಪ್ಪನವರ ಕುರಿತಾಗಲಿ ಅವರ ಕೃತಿಗಳ ಕುರಿತಾಗಿ ದಿವ್ಯ ಮೌನವಿರುತ್ತದೆ.

ಕನ್ನಡದ ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತರಾದ ಪಾಟೀಲ ಪುಟ್ಟಪ್ಪನವರು ಸಾರ್ವಜನಿಕ ಸಭೆಯೊಂದರಲ್ಲಿ "ಭೈರಪ್ಪನವರಿಗೆ ಜ್ಞಾನಪೀಠ ಸಿಗದಿರಲಿ ಎಂದು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ" ಎಂಬ ಆಪಾದನೆ ಮಾಡಿದರು. ಭೈರಪ್ಪನವರ ಕೃತಿಗಳಲ್ಲಿ ಸತ್ಯನಿಷ್ಟೆಯಿದೆ, ಆಳವಾದ ಅಧ್ಯಯನವಿದೆ, ಗಂಭೀರ ಸಾಹಿತ್ಯವಿದೆ, ಜನಪ್ರಿಯ ಶೈಲಿಯೂ ಇದೆ.ಈ ತರಹದ ಸಂಚು ಇರುವದೇ ಆದರೆ, ಸಂಚುಗಾರರು ಈ ಎಲ್ಲ ಮೌಲ್ಯಗಳಿಗೂ ದ್ರೋಹ ಬಗೆಯುತ್ತಿದ್ದಾರೆ.ಕನ್ನಡದ ಸಾಹಿತಿಗೆ ಜ್ಞಾನಪೀಠ ಸಿಗದಂತೆ ಮಾಡುವ ಸಂಚು ಕನ್ನಡದ ಪರವೇನಲ್ಲ. "ನಾನು ನಿಮ್ಮ ಅಭಿಪ್ರಾಯಗಳನ್ನು ಒಪ್ಪದಿರಬಹುದು. ಆದರೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ನಾನು ಹೋರಾಡುತ್ತೇನೆ" ಎಂದು ಹೇಳಿದ ವಿಕ್ಟರ್ ಹ್ಯೂಗೋ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲತತ್ವವನ್ನು ತಿಳಿಯಪಡಿಸಿದ್ದಾನೆ. ಭೈರಪ್ಪನವರ ವಿಚಾರಗಳಿಗೆ ಮಾಧ್ಯಮಗಳಲ್ಲಿ ಸಿಗಬೇಕಾದ ಸ್ಥಾನವನ್ನು ನಿರಾಕರಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇವರು ಅನ್ಯಾಯವೆಸಗುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಭೈರಪ್ಪನವರ "ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವದು ಅಸಾಧ್ಯ" ಎಂಬ ಲೇಖನ ಪ್ರಕಟವಾಯಿತು. ಭೈರಪ್ಪನವರು "ಐತಿಹಾಸಿಕ ವಸ್ತು ಮತ್ತು ವ್ಯಕ್ತಿಗಳನ್ನು ಪಾತ್ರಗಳಾಗಿ ಚಿತ್ರಿಸುವಾಗ ಸಾಹಿತಿ ವಹಿಸಬೇಕಾದ ಸ್ವಾತಂತ್ರ್ಯ ಯಾವ ರೀತಿಯದು?" ಎಂಬ ಸಾಹಿತ್ಯಿಕ ಪ್ರಶ್ನೆಯನ್ನು ಎತ್ತಿದರು.ಅಪಾರ ಸಂಖ್ಯೆಯಲ್ಲಿ ವಾಚಕರಿಂದ ಈ ಲೇಖನದ ಕುರಿತು, ಅದರ ಔಚಿತ್ಯದ ಕುರಿತು, ಪ್ರಶಂಸೆ ವ್ಯಕ್ತವಾಯಿತು. ಆದರೆ ಹಲವಾರು ವಿಚಾರವಾದಿಗಳು ಭೈರಪ್ಪನವರ ಈ ಲೇಖನದ ಬಗ್ಗೆ ಪ್ರತಿಕ್ರಿಯಿಸುತ್ತಾ "ಅವರೊಬ್ಬ ಬಲಪಂಥೀಯ. ಇತಿಹಾಸದ ಬಗೆಗೆ ಮಾತನಾಡಲು ಅವರು ಯೋಗ್ಯರಲ್ಲ. ಅವರದು ದುರ್ಬಲ ಕೃತಿಗಳು.ಸಮಾಜದ ಒಂದು ವರ್ಗವನ್ನು ಅವರು ಸುಂದರವಾಗಿ ಚಿತ್ರಿಸಿ ಇತರರನ್ನು ಕೀಳಾಗಿ ತೋರಿಸುವವರು" ಎಂಬ ಅಸಂಬದ್ಧ, ಅತಾರ್ಕಿಕ, ನಿರಾಧಾರದ ಆರೋಪಗಳನ್ನು ಮಾಡಿದರು. ಭೈರಪ್ಪನವರ ಸಾಹಿತ್ಯಿಕ ಪ್ರಶ್ನೆಗಳಿಗೆ ಉತ್ತರಿಸದೇ ಈ ತರಹ ಸಾಹಿತಿಯೊಬ್ಬನನ್ನು ಸಮಾಜದ ಹಿರಿಯರು ಹೀಗಳೆದಿದ್ದು ಸಹೃದಯಿ ಕನ್ನಡಿಗರ ಮನ ನೋಯಿಸಿದುದು ಸಹಜ. ಹಿರಿಯ ಸಾಹಿತಿ ಸುಮತೀಂದ್ರ ನಾಡಿಗರು ಈ ನೋವನ್ನು ಕನ್ನಡದ ಸಾಹಿತಿಗಳಲ್ಲಿಯ ಗುಂಪುಗಾರಿಕೆಯನ್ನು, ಸಹಲೇಖಕನ ಬೆಂಬಲಕ್ಕೆ ನಿಲ್ಲದ ಇತರ ಸಾಹಿತಿಗಳ ಕುರಿತು ಒಟ್ಟಾರೆ ಸಾಹಿತ್ಯಿಕ-ಸಾಮಾಜಿಕ ವಾತಾವರಣದ ಕುರಿತು ಖೇದ ವ್ಯಕ್ತ ಪಡಿಸುತ್ತಾ ಲೇಖನ ಬರೆದರು. ಭೈರಪ್ಪನವರ ಕುರಿತು ಈ ನಿಂದನೆಗಳು ನಿರೀಕ್ಷಿತ ವಲಯಗಳಲ್ಲಿ, ನಿರೀಕ್ಷಿತ ಗುಂಪುಗಳಿಂದ ಬಂದಿರುವದು ಸಾಹಿತಿಗಳಿಗೂ ಗೊತ್ತು. ಸಾರ್ವಜನಿಕರ ಗಮನವೂ ಇತ್ತ ಉಂಟು. ಸಮಾಜ ಬುದ್ಧಿಶಕ್ತಿಯನ್ನೂ ಕಲೆಯನ್ನೂ ಮೆಚ್ಚುತ್ತದೆ ಆದರೆ ಗೌರವಿಸುವದು ನೈತಿಕ ಶಕ್ತಿಯುಳ್ಳವರನ್ನು ಮಾತ್ರ. ಸತ್ಯಪರತೆ ಮತ್ತು ಶೀಲದ ನಡತೆಗಳಿಂದಾಗಿಯೇ ಭೈರಪ್ಪನವರು ಕನ್ನಡಿಗರ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

ಮರಾಠೀ ಭಾಷಿಕರಲ್ಲಿ ಬಹುಜನಪ್ರಿಯತೆಯನ್ನು ಭೈರಪ್ಪನವರು ಹೊಂದಿದ್ದಾರೆ. ಅವರ ತಬ್ಬಲಿಯು ನೀನಾದೆ ಮಗನೆ ಕೃತಿಯು ಗೋಧೂಲಿ ಎಂಬ ಹೆಸರಿನಿಂದ ಹಿಂದಿಯಲ್ಲಿ ೫೦,೦೦೦ ಪ್ರತಿ ಮಾರಾಟವಾಗಿ ಅಪಾರ ಜನಪ್ರಿಯತೆ ಗಳಿಸಿದೆ. ಇವರಿಗೆ ಜ್ಞಾನಪೀಠವೇಕೆ ಸಿಗುತ್ತಿಲ್ಲವೆಂದು ಆ ಭಾಷೆಯ ಲೇಖಕರು ಕೇಳಿದಾಗ ಜ್ಞಾನಪೀಠ ಸಂಸ್ಥೆಯು, ಕನ್ನಡದ ಆಯ್ಕೆ ಸಮಿತಿಯು ಅವರ ಹೆಸರನ್ನು ಶಿಫಾರಸು ಮಾಡಿಲ್ಲವೆಂದು ಹೇಳುತ್ತಿದೆ. ಮಾಹಿತಿ ಸ್ವಾತಂತ್ರ್ಯದ ಈ ಕಾಲದಲ್ಲಿ ಆಯ್ಕೆ ಸಮಿತಿಯ ಸದಸ್ಯರು ಭೈರಪ್ಪನವರ ಹೆಸರನ್ನು ಏಕೆ ಶಿಫಾರಸು ಮಾಡಿಲ್ಲ? ಯಾರ ಹೆಸರನ್ನು ಯಾವ ಆಧಾರದ ಮೇಲೆ ಶಿಫಾರಸು ಮಾಡುತ್ತಿರುವರು ಎಂಬುದನ್ನು ತಿಳಿಸಿದರೆ ಜನರ ಸಂಶಯ ಪರಿಹಾರವಾಗುತ್ತದೆ. ಇಲ್ಲದಿದ್ದರೆ ಪುಟ್ಟಪ್ಪನವರು ತಿಳಿಸಿದ ಸಂಚಿನಲ್ಲಿ ಇವರೂ ಭಾಗಿಗಳು ಎಂದಾಗುವದಿಲ್ಲವೆ ?

0 Comments:

Post a Comment

<< Home