ಸಾರ್ಥ - ಒಂದು ವಿಮರ್ಶೆ
ಪ್ರಾಚೀನ ಭಾರತದಲ್ಲಿ ವ್ಯಾಪಾರಿಗಳು ಆನೆ, ಕುದುರೆ, ಹೇಸರಗತ್ತೆ ಮತ್ತು ಎತ್ತಿನ ಬಂಡೆಗಳಲ್ಲಿ ಸರಕುಗಳನ್ನು ಹೇರಿಕೊಂಡು ವ್ಯಾಪಾರಾರ್ಥವಾಗಿ ದೂರದೂರದ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದರು. ಇಂತಹ ಸಮೂಹಗಳನ್ನು ಸಂಸ್ಕೃತದಲ್ಲಿ "ಸಾರ್ಥ" ಎನ್ನುವರು.
ವೈದಿಕ ಸಂಪ್ರದಾಯದಲ್ಲಿ ಜನಿಸಿದ ನಾಗಭಟ್ಟನು ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸುವದು ಕಥೆಯ ಒಂದು ಮುಖವಾದರೆ, ಇನ್ನೊಂದು ಮುಖ ಅವನ ಆಧ್ಯಾತ್ಮಿಕ ಅಂತರ್ಯಾತ್ರೆ. ಹೀಗೆ ಎಂಟನೇ ಶತಮಾನದ ಐತಿಹಾಸಿಕ ಕಥಾವಸ್ತುವನ್ನು ಹೊಂದಿರುವ 'ಸಾರ್ಥ' ಒಂದು ವಿಶಿಷ್ಟ ಕೃತಿ. ಸಾರ್ಥದ ಜೊತೆ ಸಂಚರಿಸಿ ಅದರ ಒಳಮರ್ಮಗಳನ್ನು ತಿಳಿದುಕೊಂಡು, ತನ್ಮೂಲಕ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಲು ನಾಗಭಟ್ಟನನ್ನು ರಾಜಾ ಅಮರುಕನು ನಿಯುಕ್ತಗೊಳಿಸುತ್ತಾನೆ. ಸುಮಾರು ಮೂರು ವರ್ಷಗಳ ನಂತರ ಮಥುರೆಯಲ್ಲಿ ಅನಿರೀಕ್ಷಿತವಾಗಿ ಭೇಟಿಯಾದ ಯಾತ್ರಿ ನಾರಾಯಣ ದೀಕ್ಷಿತರು, ರಾಜಾ ಅಮರುಕನು ನಾಗಭಟ್ಟನ ಸುಂದರಳಾದ ಹೆಂಡತಿ ಶಾಲಿನಿಯನ್ನು ವಶಪಡಿಸಿಕೊಂಡಿರುವದನ್ನು ತಿಳಿಸುತ್ತಾರೆ. ತನ್ನ ಯೋಗಶಕ್ತಿಯಿಂದ ರಾಜನ ಮನಸ್ಸನ್ನು ಪ್ರವೇಶಿಸಿ, ಅವನು ತನ್ನನ್ನು ದೂರಕಳಿಸಿದ್ದು ವಾಸ್ತವವಾಗಿ ಈ ಉದ್ದೇಶದಿಂದಲೇ ಎಂಬ ಕಠೋರಸತ್ಯವನ್ನು ತಿಳಿದು ದಿಗ್-ಭ್ರಾಂತನಾಗುತ್ತಾನೆ. ನಾಗಭಟ್ಟನು ಸಾಂಪ್ರದಾಯಿಕ ಹಿನ್ನಲೆಯಿಂದ ಬಂದವನಾದರೂ ಇತರ ಧಾರ್ಮಿಕ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವನು; ವಿಚಿತ್ರವೆನಿಸುವ ವಿಧಿವಿಧಾನಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ನೈತಿಕ ಮತ್ತು ಆಧ್ಯಾತ್ಮಿಕವಾಗಿ ಸಾಹಸೀ ಮನೋಭಾವವುಳ್ಳವನು.
ಸೆಳೆದು ಓದಿಸಿಕೊಂಡು ಹೋಗುವ ಕಥಾನಿರೂಪಣೆ, ಪುರಾವೆಗಳನ್ನು ಆಧರಿಸಿದ ಚಾರಿತ್ರಿಕ ಸಂಗತಿ ಮತ್ತು ವ್ಯಕ್ತಿಗಳನ್ನು ಆಧರಿಸಿರುವ ಕಥಾವಸ್ತು ಈ ಕಾದಂಬರಿಯ ವೈಶಿಷ್ಟ್ಯ. ದೇಶ-ಕಾಲಗಳ ಮಿತಿಯನ್ನು ಮೀರಿದ 'ಸನಾತನ ಭಾರತ'ವೆಂಬ ಆನುಭಾವಿಕ ಸತ್ಯವನ್ನು ಕಾದಂಬರಿ ಪ್ರಕಾರದ ಸಾಹಿತ್ಯದಲ್ಲಿ ವಿಶಿಷ್ಟರೀತಿಯಲ್ಲಿ ನಿರೂಪಿಸಲಾಗಿದೆ. ಭಾರತವೆಂಬುದು ಭೌಗೋಳಿಕ ಪ್ರದೇಶವೆಂಬುದು ಎಷ್ಟು ಸತ್ಯವೋ, ಅದು ಒಂದು ಮಾನಸಿಕ ಪ್ರಜ್ಞಾಸ್ಥತಿ ಎಂಬುದು ಅಷ್ಟೇ ಸತ್ಯವಲ್ಲವೇ ?
For a detailed review pls read this article:
http://www.ourkarnataka.com/books/saartha_book_review.htm
For a detailed review pls read this article:
http://www.ourkarnataka.com/books/saartha_book_review.htm
0 Comments:
Post a Comment
<< Home