ತಿರುಮಲೆಯ ಶ್ರೀವೆಂಕಟೇಶ ದೇವರು
ತಿರುಮಲೆಯ (ತಿರು-ಶ್ರೀ, ಮಲೆ-ಬೆಟ್ಟ) ಶ್ರೀ ವೇಂಕಟೇಶ್ವರ ದೇವಸ್ಥಾನವು ಭಾರತದ ಜನಪ್ರಿಯ ಯಾತ್ರಾಸ್ಥಳವಾಗಿದೆ. ಭಾರತದಲ್ಲೇ ಅತ್ಯಂತ ಶ್ರೀಮಂತವೂ, ಜಗತ್ತಿನಲ್ಲೇ ಅತಿ ಹೆಚ್ಚು ಭಕ್ತರಿಂದ ಸಂದರ್ಶಿಸಲ್ಪಡುವ ದೇವಾಲಯವು ಇದಾಗಿದೆ. ದಿನ ನಿತ್ಯ ೧-೨ ಲಕ್ಷ ಮತ್ತು ವಿಶೇಷ ದಿನಗಳಂದು ಸುಮಾರು ೫ ಲಕ್ಷ ಭಕ್ತರು ಇಲ್ಲಿಗೆ ಬರುವರು. ರೈತಾಪಿ ಜನರಲ್ಲದೇ ಸಿನಿಮಾ-ರಾಜಕೀಯ-ಉದ್ಯಮ ಕ್ಷೇತ್ರದ ದಿಗ್ಗಜರಿಂದ ಹಿಡಿದು ವಿಜ್ಞಾನಿಗಳೂ ಕೂಡ ಶ್ರದ್ಧಾ-ಭಕ್ತಿಗಳಿಂದ ಇಲ್ಲಿಗೆ ಬರುವರು.ಇಂದಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ದೇವಾಲಯದ ದೈವವನ್ನು ವೇಂಕಟೇಶ, ಶ್ರೀನಿವಾಸ, ಗೋವಿಂದ ಮತ್ತು ಬಾಲಾಜಿ ಎಂಬ ಹೆಸರುಗಳಿಂದ ಕರೆಯುವರು.
ಶ್ರೀವೇಂಕಟೇಶ ಮಹಾತ್ಮೆ
ಶ್ರೀವೇಂಕಟೇಶ ಮಹಾತ್ಮೆ ಎಂಬ ಕಥೆಯಂತೆ ಕಲಿಯುಗಾರಂಭದಲ್ಲಿ ಕಶ್ಯಪ ಮಹರ್ಷಿಯ ನೇತ್ರತ್ವದಲ್ಲಿ ಗಂಗಾತಟದಲ್ಲಿ ಋಷಿಗಳು ಯಜ್ಞವೊಂದನ್ನು ಆಚರಿಸುತ್ತಿದ್ದರು. ಯಜ್ಞಫಲವನ್ನು ತ್ರಿಮೂರ್ತಿಗಳಲ್ಲಿ ಯಾರಿಗೆ ಕೊಡಬೇಕು ಎಂಬ ಪ್ರಶ್ನೆ ಉಂಟಾದಾಗ, ಭೃಗು ಮಹರ್ಷಿಯು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ವಹಿಸಿಕೊಂಡನು. ಸತ್ಯಲೋಕದಲ್ಲಿ ಬ್ರಹ್ಮನಿಂದಲೂ ಕೈಲಾಸದಲ್ಲಿ ಶಿವನಿಂದಲೂ ಅನಾದರಕ್ಕೆ ಒಳಗಾದೆನೆಂಬ ತಪ್ಪು ಕಲ್ಪನೆಗೆ ಒಳಗಾದ ಮುಂಗೋಪಿ ಭೃಗುವು ಅವರನ್ನು ಶಪಿಸಿ ವೈಕುಂಠವನ್ನು ತಲುಪಿದನು. ಯೋಗನಿದ್ರೆಯಲ್ಲಿದ್ದ ವಿಷ್ಣುವೂ ತನ್ನನ್ನು ಗಮನಿಸದ್ದನ್ನು ಕಂಡು ಕೋಪದಿಂದ ಅವನ ಎದೆಗೆ ಕಾಲಿನಿಂದ ಒದ್ದನು. ಭೃಗುವಿನ ಬಲಗಾಲಿನಲ್ಲಿದ್ದ ಮೂರನೆಯ ಕಣ್ಣು ಅವನ ಮುಂಗೋಪಿತನದ ಕಾರಣವಾಗಿತ್ತು. ಎಚ್ಚೆತ್ತ ವಿಷ್ಣುವು ಭೃಗುವಿನ ಕ್ಷಮೆಯಾಚುತ್ತ ಅವನ ಕಾಲನ್ನು ಒತ್ತುತ್ತ ಆ ಕಣ್ಣನ್ನು ಕಿತ್ತಿ ಹಾಕಿದನು. ಮುನಿಗೆ ಆತ ತನ್ನ ತಪ್ಪಿನ ಅರಿವಾಗಿ ವಿಷ್ಣುವಿಗೇ ಯಜ್ಞಫಲವು ಸಿಗಬೇಕೆಂದು ನಿರ್ಧರಿಸಿ ಭೂಲೋಕಕ್ಕೆ ಹಿಂದಿರುಗಿದನು. ವಿಷ್ಣುವಿನ ಹೃದಯೇಶ್ವರಿಯಾದ ಲಕ್ಷ್ಮಿಯು, ಮುನಿಯು ತನ್ನ ವಾಸಸ್ಥಾನಕ್ಕೆ ಒದ್ದರೂ ವಿಷ್ಣುವು ಕೋಪಗೊಳ್ಳದೇ ಹೋದುದನ್ನು ಕಂಡಳು, ಅವಮಾನದಿಂದ ಕುದಿಯುತ್ತ ಮುನಿಸಿಕೊಂಡು ವೈಕುಂಠವನ್ನು ತೊರೆದು ಭೂಲೋಕದ ಕರವೀರಪುರದಲ್ಲಿ ತಪೋಮಗ್ನಳಾದಳು. ಅವಳನ್ನು ಹುಡುಕುತ್ತ ಬಂದ ವಿಷ್ಣುವು ತಿರುಮಲೆಯ ಕಾಡಿನಲ್ಲಿ ಧ್ಯಾನಸ್ಥನಾದನು. ಅವನ ಸುತ್ತ ಹುತ್ತವೊಂದು ಬೆಳೆಯಿತು. ಆಗ ಬ್ರಹ್ಮ-ಶಿವರು ಹಸು-ಕರುಗಳ ರೂಪವನ್ನು ಧರಿಸಿ ಆ ಪ್ರದೇಶವನ್ನು ಆಳುತ್ತಿದ್ದ ಚೋಳರಾಜನ ಕೊಟ್ಟಿಗೆಯನ್ನು ಸೇರಿದರು. ಪ್ರತಿದಿನ ಹುಲ್ಲು ಮೇಯಲು ಬಂದಾಗ ಹಸುವು ಹುತ್ತದ ಮೇಲೆ ಹಾಲನ್ನು ಸುರಿಸುತ್ತಿತ್ತು. ಆಗ ವಿಷ್ಣುವಿನ ಹಸಿವು-ದಾಹ ಇಂಗುತ್ತಿದ್ದವು. ಪ್ರತಿದಿನ ಕೊಟ್ಟಿಗೆಗೆ ಮರಳಿದ ಹಸುವು ಹಾಲನ್ನು ಕೊಡದಿದ್ದನ್ನು ಗಮನಿಸಿದ ಗೊಲ್ಲನು ಅದನ್ನು ಹಿಂಬಾಲಿಸಿ, ಹುತ್ತದ ಮೇಲೆ ಅದು ಹಾಲನ್ನು ಕರೆಯುವುದನ್ನು ಗಮನಿಸಿದನು. ಕೋಪದಿಂದ ಹಸುವನ್ನು ಹೊಡೆಯಹೋದ ಅವನು ಗುರಿತಪ್ಪಿ ವಿಷ್ಣುವಿನ ಹಣೆಗೆ ಹೊಡೆದನು. ಚಿಮ್ಮಿದ ರಕ್ತವನ್ನು ಕಂಡು ಗೊಲ್ಲನು ಅಲ್ಲಿಯೇ ಮೃತಪಟ್ಟರೆ ಕ್ಷಮೆ ಕೇಳಲು ಬಂದ ಅರಸನು ಶಾಪದಿಂದ ಪಿಶಾಚವಾದನು. ವಿಷ್ಣುವು ಶ್ರೀನಿವಾಸನೆಂಬ ಹೆಸರಿನಿಂದ ಬಕುಳೆಯೆಂಬ ವೃದ್ಧ ತಾಪಸಿಯ ಆಶ್ರಮವನ್ನು ಸೇರಿದನು. ದ್ವಾಪರ ಯುಗದಲ್ಲಿ ಕೃಷ್ಣನ ಸಾಕುತಾಯಿಯಾಗಿದ್ದ ಯಶೋದೆಯವಳು. ಶ್ರೀನಿವಾಸನು ಅಲ್ಲಿ ಆಶ್ರಮವಾಸಿಯಾಗಿದ್ದಾಗ ಆನೆಗಳ ಕಾಟವನ್ನು ನಿವಾರಿಸಲು ಒಂದು ದಿನ ಬೇಟೆಗೆ ಹೋದನು. ಅಲ್ಲಿ ಸಖಿಯರೊಂದಿಗೆ ಬಂದಿದ್ದ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ಅವನು ಭೇಟಿಯಾದನು. ತ್ರೇತಾಯುಗದಲ್ಲಿ ವೇದಾವತಿ ಎಂಬ ತಾಪಸಿಯಾಗಿದ್ದು ಸೀತೆಗೆ ಸಹಾಯ ಮಾಡಿದವಳು ಅವಳು. ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ದೇವತೆಗಳ ಸಮ್ಮುಖದಲ್ಲಿ ವಿವಾಹವು ವಿಜೃಂಭಣೆಯಿಂದ ನೆರವೇರಿತು. ಶ್ರೀನಿವಾಸನು ಭಕ್ತರನ್ನು ಹರಸುತ್ತಾ ಹೀಗೆ ಭೂಲೋಕದಲ್ಲಿ ನೆಲೆಸಿದನು.
ಸ್ಥಳ ಪುರಾಣಗಳಂತೆ ಶ್ರೀನಿವಾಸನ ಸ್ವಯಂಭುವಾದ ವಿಗ್ರಹವನ್ನು ರಂಗದಾಸನೆಂಬುವನ ಸಹಾಯದಿಂದ ತೊಂಡೈಮಾನನೆಂಬ ಅರಸು ಹುತ್ತವೊಂದರಲ್ಲಿ ಕಂಡುಕೊಂಡನು. ತೊಂಡೈಮಾನನೇ ದೇವಾಲಯವನ್ನು ನಿರ್ಮಿಸಿದನು. ೯ನೇ ಶತಮಾನದಲ್ಲಿ ಕಂಚೀಪುರದ ಪಲ್ಲವರು, ನಂತರ ತಂಜಾವೂರಿನ ಚೋಳರು, ಮಧುರೈ ಪಾಂಡ್ಯರು ಮತ್ತು ವಿಜಯನಗರದ ಅರಸರು ದೇಗುಲಕ್ಕೆ ದತ್ತಿಗಳನ್ನು ನೀಡಿದ್ದಾರೆ. ಕೃಷ್ಣದೇವರಾಯನ ಕಾಲದಲ್ಲಿ ದೇಗುಲವು ಹೆಚ್ಚಿನ ಏಳಿಗೆಯನ್ನು ಕಂಡಿತು. ವಿಜಯನಗರದ ಪತನಾನಂತರ ಮರಾಠರ ರಘೋಜಿ ಭೋಂಸ್ಲೆ, ಮೈಸೂರಿನ ಒಡೆಯರು ಮತ್ತು ಗಡವಾಲ್ ದ ಅರಸರು ದೇಗುಲಕ್ಕೆ ದೇಣಿಗೆಗಳನ್ನು ನೀಡುತ್ತಾ ಬಂದರು. ೧೮೪೩ರಲ್ಲಿ ಈಸ್ಟ ಇಂಡಿಯಾ ಕಂಪನಿಯು ದೇಗುಲದ ಆಡಳಿತವನ್ನು ತಿರುಮಲೆಯ ಹಾತಿರಾಮ ಮಠಕ್ಕೆ ವಹಿಸಿತು. ಮದ್ರಾಸಿನ ಶಾಸನ ಸಭೆಯು ೧೯೩೩ರಲ್ಲಿ ದೇಗುಲದ ಆಡಳಿತಕ್ಕಾಗಿ ಶಾಸನವೊಂದರ ಮೂಲಕ ತಿರುಮಲ-ತಿರುಪತಿ-ದೇವಸ್ಥಾನ ಕಮೀಟಿಯನ್ನು ಸ್ಥಾಪಿಸಿತು. ನಂತರದ ವರ್ಷಗಳಲ್ಲಿ ಆ ಶಾಸನದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳನ್ನು ಮಾಡಿದರು. ಈಗ ದೇವಸ್ಥಾನದ ಆಡಳಿತವು ಈ ಕಮೀಟಿಯ ಮುಖಾಂತರ ನಡೆಯುತ್ತಿದೆ.
ದೇಗುಲದಲ್ಲಿ ಪೂಜೆಯು ವೈಷ್ಣವ ವೈಖಾನಸ ಆಗಮಗಳಿಗೆ ಅನುಸಾರವಾಗಿ ನಡೆಯುವದು. ಪೂಜೆಯನ್ನು ಮಿರಾಸಿದಾರರೆಂಬ ನಾಲ್ಕು ಕುಟುಂಬಗಳ ಸದಸ್ಯರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿದ್ದಾರೆ. ಮೂಲವಿಗ್ರಹವನ್ನು ಸ್ಪರ್ಶಿಸುವ ವಿಶೇಷ ಸೇವಾಧಿಕಾರ ಈ ಕುಟುಂಬಗಳ ಸದಸ್ಯರದು. ಇವರ ಹೊರತಾಗಿ ಯಾರಿಗೂ ವಸ್ತ್ರರಹಿತವಾದ ಮೂಲವಿಗ್ರಹದ ದರ್ಶನ ಲಭ್ಯವಿಲ್ಲ. ವಸ್ತ್ರ-ಆಭರಣಗಳಿಂದ ಅಲಂಕೃತವಾದ ವಿಗ್ರಹವನ್ನು ಮಾತ್ರ ಭಕ್ತರು ದೇಗುಲದಲ್ಲಿ ದರ್ಶಿಸಬಹುದು. ವಿಗ್ರಹವು ಶಿಲ್ಪಶಾಸ್ತ್ರದ ನಿಯಮಗಳಿಗನುಸಾರವಾಗಿಲ್ಲ.
ಸೀತಾಪತಿಯೆಂಬ ವಿದ್ವಾಂಸರ ಅನುಸಾರ ನಿಂತಿರುವ ಭಂಗಿಯಲ್ಲಿರುವ ಕಮಲಾಸನದ ಮೇಲಿದ್ದು ಅತ್ಯಂತ ಸುಂದರವಾಗಿದೆ. ಸುಮಾರು ೯ ಫೂಟಿನಷ್ಟು ಎತ್ತರವಿರುವ ಈ ವಿಗ್ರಹವು ಮಂದಸ್ಮಿತವೂ ಅರ್ಧ-ಉನ್ಮೀಲಿತ ನೇತ್ರವೂ ಆಗಿದೆ. ವಿಗ್ರಹಕ್ಕೆ ಜಟಾ-ಜೂಟಗಳಿದ್ದು ಅವು ಭುಜದವರೆಗೂ ವ್ಯಾಪಿಸಿವೆ. ಹಣೆಯ ಮೇಲೆ ಚಂದ್ರಾಕೃತಿಯಿದೆ. ಕಿವಿಯಲ್ಲಿ ಆಭರಣಗಳಿವೆ. ಎದೆಯು ಸುಮಾರು ೩೬-೪೦ ಇಂಚುಗಳಷ್ಟಿದ್ದು ನಡುವು ೨೪-೨೭ ಇಂಚುಗಳಷ್ಟಿದೆ. ಬಲಎದೆಯ ಮೇಲೆ ಲಕ್ಷ್ಮಿಯನ್ನು ಕುಳಿತ ಭಂಗಿಯಲ್ಲಿ ಕೆತ್ತಲಾಗಿದೆ. ನಾಲ್ಕು ಕಂಠೀಹಾರಗಳು ಮತ್ತು ಯಜ್ಞೋಪವೀತಗಳಿವೆ. ಕೈಗೆ ನಾಗಾಭರಣಗಳನ್ನು ತೊಡಿಸಲಾಗಿದೆ. ಕೆಳ ಬಲಗೈ ವರದಮುದ್ರೆಯಲ್ಲಿದೆ. ಕೆಳ ಎಡಗೈ ಕಾಟ್ಯವಲಂಬವೆಂಬ [ಕಟಿ-ಸೊಂಟ, ಅವಲಂಬನ-ಆಧಾರ] ಮುದ್ರೆಯಲ್ಲಿದೆ. ಮೂಲವಿಗ್ರಹದ ಭಾಗವಲ್ಲದ ಮೇಲ್ ಬಲಗೈಯಲ್ಲಿ ಪಾಂಚಜನ್ಯ ಶಂಖವೂ ಎಡಗೈಯಲ್ಲಿ ಸುದರ್ಶನ ಚಕ್ರವೂ ಇವೆ. ಒಟ್ಟಿನಲ್ಲಿ ಅತ್ಯಂತ ಪ್ರಮಾಣಬದ್ಧವಾದ ಈ ವಿಗ್ರಹವು ಭಾರತದಲ್ಲೇ ಅತ್ಯಂತ ನಯನ ಮನೋಹರವಾದುದು ಎಂದು ಹೇಳಬಹುದು.
೧೨ನೇ ಶತಮಾನದ ವೇಳೆಗಾಗಲೇ ತಿರುಮಲೆಯ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿತ್ತು. ಶ್ರೀವೆಂಕಟಾಚಲ ಇತಿಹಾಸಮಾಲೆಯೆಂಬ ಸಮಕಾಲೀನ ಕೃತಿಯಲ್ಲಿ ವಿಗ್ರಹದ ಸ್ವರೂಪದ ಕುರಿತಾಗಿ ನಡೆದ ವಿವಾದ ಕುರಿತು ವಿವರಿಸಲಾಗಿದೆ. ಯಾದವ ವಂಶದ ರಾಜನ ಆಸ್ಥಾನದಲ್ಲಿ ಶೈವರು ಹಾಗೂ ಶ್ರೀರಾಮಾನುಜರ [ಕ್ರಿಶ ೧೦೧೭ - ೧೧೩೭] ನೇತ್ರತ್ವದಲ್ಲಿ ವೈಷ್ಣವರು ವಿಗ್ರಹವು ಶೈವವೋ ಅಥವಾ ವೈಷ್ಣವವೋ ಎಂದು ವಾದಿಸಿದರು.
ಶೈವರ ವಾದದ ಮುಖ್ಯಾಂಶಗಳು ಹೀಗಿದ್ದವು. ಅವರ ಅನುಸಾರ ವಿಗ್ರಹವು ಷಣ್ಮುಖ ಅಥವಾ ಕುಮಾರಸ್ವಾಮಿಯದು. ಆದ್ದರಿಂದಲೇ ದೇಗುಲದ ಪುಷ್ಕರಣಿಗೆ ’ಸ್ವಾಮಿ’ ಪುಷ್ಕರಿಣಿ ಎಂಬ ಹೆಸರಿದೆ. ವಾಮನ ಪುರಾಣದಲ್ಲಿ ವೆಂಕಟಾಚಲದಲ್ಲಿ ಷಣ್ಮುಖನು ಶಿವನನ್ನು ಆರಾಧಿಸಿದುದರ ವರ್ಣನೆಯಿದೆ. ಆದ್ದರಿಂದ ವಿಗ್ರಹವು ಷಣ್ಮುಖನದ್ದು – ಆ ಘಟನೆಯನ್ನು ನೆನಪಿಸಲು ಇರುವಂಥದ್ದು. ವಿಷ್ಣುವು ವೆಂಕಟಾಚಲದಲ್ಲಿ ಅದಾಗಲೆ ಭೂವರಾಹ ರೂಪದಲ್ಲಿ ನೆಲೆಸಿದ್ದಾನೆ. ವಿಗ್ರಹವು ಶಂಖ-ಚಕ್ರಗಳನ್ನು ಧರಿಸಿಲ್ಲವಾದ್ದರಿಂದ ಅದು ವಿಷ್ಣುವಿನದ್ದಲ್ಲ. ಕುಮಾರಸ್ವಾಮಿಯು ತಪೋನಿರತನಾಗಿದ್ದರಿಂದ – ಅವನ ವಿಗ್ರಹ ದ್ವಿಬಾಹುವೂ ಶಸ್ತ್ರರಹಿತವೂ ಆಗಿದೆ. ಜಟಾ-ಜೂಟಗಳೂ ನಾಗಾಭರಣಗಳೂ ಹಣೆಯು ಮೇಲಿನ ಚಂದ್ರನೂ ಅದು ಶೈವ ಮೂರ್ತಿಯೆಂದು ಸೂಚಿಸುತ್ತವೆ. ಸಾಂಪ್ರದಾಯಿಕ ಅರ್ಚನೆಯು ಬಿಲ್ವಪತ್ರೆಯಿಂದ ನಡೆಯುತ್ತಿರುವದೂ ಇದೇ ಕಾರಣಕ್ಕಾಗಿ.
ಶ್ರೀರಾಮಾನುಜರು ಅವರಿಗೆ ಉತ್ತರಿಸುತ್ತ, ಹೀಗೆ ವಾದಿಸಿದರು. ಈ ದೇಗುಲದ ಪುಷ್ಕರಣಿಯು ಇತರ ಪುಷ್ಕರಣಿಗಳಿಗಿಂತ ಶ್ರೇಷ್ಠವಾದುದನ್ನು ಸೂಚಿಸಲು ಅದನ್ನು ’ಸ್ವಾಮಿ ಪುಷ್ಕರಿಣಿ’ಎಂದು ಕರೆಯಲಾಗುತ್ತಿದೆ. ಕುಮಾರನು ತಪವನ್ನಾಚರಿಸಿ ಪವಿತ್ರಗೊಳಿಸಿದ ಸ್ಥಾನವು ಸಮೀಪದಲ್ಲೇ ಇರುವ ’ಕುಮಾರ ಧಾರಾ’ ಕ್ಷೇತ್ರ. ವಿಷ್ಣುವು ವೈಕುಂಠದಿಂದ ಸ್ವಾಮಿ ಪುಷ್ಕರಣಿಯನ್ನು ಭೂಲೋಕಕ್ಕೆ ತಂದನೆಂದು ವರಾಹ ಪುರಾಣದಲ್ಲಿ ಹೇಳಲಾಗಿದೆ. ಸ್ಕಂದನು ತಿರುಮಲೆಗೆ ಬಂದುದೇ ವಿಷ್ಣುವನ್ನು ಪೂಜಿಸಲು. ವಿಗ್ರಹವು ಸ್ಕಂದನದಾಗಿದ್ದರೆ ಅದಕ್ಕೆ ಆರು ಮುಖ ಮತ್ತು ಹನ್ನೆರಡು ಕೈಗಳಿರಬೇಕಿತ್ತು. ನಮ್ಮಾಳ್ವಾರರ ಕೀರ್ತನೆಗಳಲ್ಲಿ ವಿಗ್ರಹವು ವಿಷ್ಣುವಿನದೆಂದು ಹೇಳಲಾಗಿದೆ. ಬ್ರಹ್ಮಾಂಡ ಪುರಾಣದ ಅನುಸಾರ ವಿಷ್ಣುವು ತನ್ನ ಭಕ್ತನಾದ ತೊಂಡೈಮಾನನ ಸಹಾಯಕ್ಕಾಗಿ ತನ್ನ ಶಂಖ-ಚಕ್ರಗಳನ್ನು ಅವನಿಗೆ ನೀಡಿದನು. ಆದ್ದರಿಂದ ವಿಗ್ರಹವು ಶಸ್ತ್ರರಹಿತವೂ ದ್ವಿಬಾಹುವೂ ಆಗಿದೆ. ವಿಗ್ರಹದ ಎದೆಯ ಮೇಲಿರುವ ಲಕ್ಷ್ಮಿಗೆ ಪ್ರಿಯವೆಂದು ಬಿಲ್ವವನ್ನು ಆರಾಧನೆಯ ಸಮಯದಲ್ಲಿ ಉಪಯೋಗಿಸುತ್ತಿರುವರು. ವಿಷ್ಣುವಿಗೂ ಜಟಾ-ಜೂಟಗಳಿರಬಹುದೆಂದು ಭಾಗವತದಲ್ಲಿ ಹೇಳಲಾಗಿದೆ. ಪದ್ಮಪುರಾಣದಲ್ಲಿ ವಿಷ್ಣುವು ನಾಗಾಭರಣಗಳನ್ನು ಧರಿಸಿದುದರ ಪ್ರಸ್ತಾಪವಿದೆ. ಭವಿಷ್ಯೋತ್ತರ ಪುರಾಣದಲ್ಲಿ ಆಕಾಶರಾಜನು ತನ್ನ ಅಳಿಯನಿಗೆ ನಾಗಾಭರಣಗಳನ್ನು ನೀಡಿದ್ದನ್ನು ಹೇಳಲಾಗಿದೆ. ಎದೆಯ ಮೇಲೆ ಲಕ್ಷ್ಮಿಯ ಹೊರತಾಗಿ ಶ್ರೀವತ್ಸದ ಗುರುತೂ ಇದೆ. ಹಣೆಯ ಮೇಲೆ ಚಂದ್ರನ ಗುರುತಿದ್ದರೂ ಇದು ವಿಷ್ಣುವಿನ ವಿಗ್ರಹವೇ.
ನಂತರ ರಾಮಾನುಜರು ವಿಗ್ರಹದ ಮುಂದೆ ಶೈವ ಮತ್ತು ವೈಷ್ಣವ ಅಸ್ತ್ರಗಳನ್ನು ಇರಿಸಿ ಭಗವಂತನೇ ನಿರ್ಧರಿಸಲಿ ಎಂದು ಬಾಗಿಲನ್ನು ಮುಚ್ಚಿಸಿದರು. ರಾತ್ರಿ ಆದಿಶೇಷನ ರೂಪದಲ್ಲಿ ರಾಮಾನುಜರು ಭಗವಂತನನ್ನು ಪ್ರಾರ್ಥಿಸಲಾಗಿ, ಮರುದಿನ ಬಾಗಿಲನ್ನು ತೆರೆದಾಗ ಅಚ್ಚರಿಯೊಂದು ಕಾದಿತ್ತು. ವಿಗ್ರಹವು ಶಂಖು-ಚಕ್ರಗಳನ್ನು ಧರಿಸಿ ತಾನು ವಿಷ್ಣುವಿನ ವಿಗ್ರಹವೆಂದು ನಿರ್ಣಯಾತ್ಮಕವಾಗಿ ಸಾರಿತ್ತು. ನಂತರ ರಾಮಾನುಜರು ದೇವಾಲಯದ ಪ್ರಾಂಗಣದಲ್ಲೇ ನರಸಿಂಹ ದೇಗುಲವನ್ನು ನಿರ್ಮಿಸಿ, ಆಳ್ವಾರರ ವಿಗ್ರಹಗಳನ್ನು ಸ್ಥಾಪಿಸಿ ದೇಗುಲಕ್ಕೆ ಖಚಿತವಾದ ವೈಷ್ಣವ ರೂಪವನ್ನು ಕೊಟ್ಟು ಪೂಜಾವಿಧಿಗಳನ್ನು ವ್ಯವಸ್ಥಿತ ಗೊಳಿಸಿದರು.
ವಿಗ್ರಹವು ಹರಿಯದೋ-ಹರನದೋ ಎಂಬುದು ಅಂದಿನಿಂದಿರುವ ವಿವಾದ. ಕೆಲ ವಿದ್ವಾಂಸರ ಪ್ರಕಾರ ವಿಗ್ರಹವು ’ವ್ಯಕ್ತ ಹರಿ ವ್ಯಕ್ತ-ಅವ್ಯಕ್ತ ಹರರ’ ಹರಿಹರ ವಿಗ್ರಹವಾಗಿದೆಯಾದ್ದರಿಂದ ಶೈವ-ವೈಷ್ಣವ ಲಕ್ಷಣಗಳೆರಡನ್ನೂ ಒಳಗೊಂಡಿದೆ.
ದೇವೀ ಭಾಗವತದಲ್ಲಿ ಕಲಿಯುಗದ ಏಕೈಕದೈವ ಶ್ರೀವೇಂಕಟೇಶ್ವರಿಯೆಂದು ಹೇಳಲಾಗಿದೆಯಂತೆ. ಮಂದಿರದ ಗೋಪುರದ ಮೇಲೆ ವೈಷ್ಣವ ಗರುಡನ ಬದಲಾಗಿ ಶಾಕ್ತಸಂಕೇತವಾದ ಸಿಂಹದ ವಿಗ್ರಹಗಳಿವೆ. ದೇವಿಗೆ ಪ್ರಿಯವಾಗಿರುವ ಶುಕ್ರವಾರದಂದು ವಿಗ್ರಹಕ್ಕೆ ಅಭಿಷೇಕ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ ಮತ್ತು ಶ್ರೀಸೂಕ್ತದ ಮಂತ್ರಗಳನ್ನು ಬಳಸಲಾಗುತ್ತದೆ. ಅಭಿಷೇಕದ ಸಮಯದಲ್ಲಿ ವಿಗ್ರಹಕ್ಕೆ ಬಟ್ಟೆ ತೊಡಿಸಿ ಅರಿಷಿಣವನ್ನು ಲೇಪಿಸುವದರಿಂದ ಅದು ದೇವಿಯ ವಿಗ್ರಹವೆಂದೂ ಕೆಲವರ ಅಭಿಪ್ರಾಯ.
ಬುದ್ಧನ ನಿರ್ಯಾಣಾನಂತರ ಬೌದ್ಧಮತ ಮತ್ತು ಅದರ ತತ್ತ್ವಗಳು ಅನೇಕ ಬದಲಾವಣೆಗಳನ್ನು ಕಂಡಿವು. ಹೀನಯಾನ-ಮಹಾಯಾನ-ವಜ್ರಯಾನವೇ ಮೊದಲಾದ ಅನೇಕ ಪ್ರಬೇಧಗಳು ಅದರಲ್ಲಿ ಉಂಟಾದವು. ಬೌದ್ಧಮತವು ಭರತಖಂಡವನ್ನೆಲ್ಲ ವ್ಯಾಪಿಸಿ ಅದರಿಂದಾಚೆಗೂ ಅನುಯಾಯಿಗಳನ್ನು ಪಡೆಯಿತು. ಮತ ಪ್ರಸಾರಕ್ಕೆ ಅನುಕೂಲವಾಗಲೆಂದು ವೈದಿಕರ ಪುರಾಣ ಕಲ್ಪನೆಗಳನ್ನು ಹಲವಾರು ಮಾರ್ಪಾಟುಗಳೊಡನೆ ಸ್ವೀಕರಿಸಲಾಯಿತು. ಬುದ್ಧನು ಹಿಂದಿನ ಜನ್ಮದಲ್ಲಿ ಬೋಧಿಸತ್ವನೆಂಬ ಹಲವಾರು ಜನ್ಮಗಳನ್ನು ತಾಳಿದನೆಂದೂ ಯುಗ-ಯುಗಗಳಿಗೆ ಪ್ರತ್ಯೇಕ ಬುದ್ಧರಿರುವರೆಂದು ಜಾತಕ ಕಥೆಗಳು ಹೇಳುತ್ತವೆ. ಬುದ್ಧನ ಹೆಸರಿನಲ್ಲಿ ದೊಡ್ಡ ದೊಡ್ಡ ದೇಗುಲಗಳೂ ಅವನ ಭವ್ಯವಾದ ಮತ್ತು ಸುಂದರವಾದ ವಿಗ್ರಹಗಳೂ ನಿರ್ಮಿಸಲ್ಪಟ್ಟವು. ವೈದಿಕರ ದೈವ ಕಲ್ಪನೆಗಳನ್ನು ಆಧರಿಸಿ ಬೌದ್ಧ ದೇವತೆಗಳು ಹುಟ್ಟಿಕೊಂಡರು. ಅಂತಹ ಸಮಯದಲ್ಲಿ ತಿರುಪತಿಯ ವಿಗ್ರಹವು ನಿರ್ಮಿಸಲ್ಪಟ್ಟು ಅದು ವೈದಿಕರ ವಿಷ್ಣುವನ್ನು ಹೋಲುವ ಅವಲೋಕಿತೇಶ್ವರ ಎಂಬ ದೈವದ್ದು. ನಂತರ ಬೌದ್ಧ ಮತಾನುಯಾಯಿಗಳ ಸಂಖ್ಯೆ ಕ್ಷೀಣಿಸಿ ಜನರು ವೈದಿಕ ಧರ್ಮದಲ್ಲಿ ಆಸಕ್ತರಾದಾಗ ಈ ದೇಗುಲವೂ ವೈದಿಕವಾಯಿತೆಂದು ಕೆಲವರ ಅಭಿಪ್ರಾಯ. ದೇಗುಲದಲ್ಲಿ ಪರಿವಾರ ದೇವತೆಗಳು ಇರದಿರುವದು, ವಿಗ್ರಹದ ಧ್ಯಾನಸ್ಥ ಅರ್ಧ-ಉನ್ಮೀಲಿತ ನೇತ್ರಗಳು, ಜಟಾ-ಜೂಟಗಳು, ಶಸ್ತ್ರರಹಿತವಾಗಿ ದ್ವಿಬಾಹುವಾಗಿರುವದು, ಗೋಪುರದ ಮೇಲೆ ಶಾಕ್ಯಸಿಂಹನೆಂದು ಬುದ್ಧನು ಪ್ರಸಿದ್ಧಿಯನ್ನು ಪಡೆದುದನ್ನು ನೆನಪಿಸರು ಇರುವ ಸಿಂಹದ ವಿಗ್ರಹಗಳು – ಇವೆಲ್ಲ ವಿಗ್ರಹವು ಬೌದ್ಧವೆಂದು ಸಾರುತ್ತವೆ ಎಂಬುದು ಅವರ ವಾದ.
ದೈವಾನುಭವವು ಪಂಚ ಜ್ಞಾನೇಂದ್ರಿಯಗಳ ಅನುಭವದ ಆಚಿನದು. ನಮ್ಮ ಭಾಷೆಯಲ್ಲಿರುವ ಪದಗಳು ಇಂದ್ರಿಯಗ್ರಹ್ಯ ಅನುಭವಗಳನ್ನು ಮಾತ್ರ ವ್ಯಕ್ತ ಪಡಿಸಲು ರೂಪಗೊಂಡಿವೆ. ’ಯತೋ ವಾಚಾ ನಿವರ್ತಂತೆ, ಅಪ್ರಾಪ್ಯ ಮನಸಾ ಸಹ’ ಎನ್ನುತ್ತದೆ ಉಪನಿಷತ್ತು. ದ್ರಷ್ಟಾರರಾದ ನಮ್ಮ ಹಿರಿಯರು ಇಂದ್ರಿಯಗೋಚರನಲ್ಲದ ಭಗವಂತನನ್ನು ನಾವು ಗ್ರಹಿಸಿ ಆಧ್ಯಾತ್ಮಿಕ ಸಾಧನೆಗಳನ್ನು ಮಾಡಲು ಅನುಕೂಲವಾಗಲೆಂದು ತಮ್ಮ ಅನುಭವಗಳ ಆಧಾರದ ಮೇಲೆ ಮೂರ್ತಿಪೂಜೆಯನ್ನು ಪರಿಚಯಿಸಿದರು. ಭಕ್ತನು ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರೆದಂತೆ, ಭಗವಂತನ ಕುರಿತಾದ ಅವನ ಗ್ರಹಿಕೆ ಹೆಚ್ಚುತ್ತಾ ಹೋಗುತ್ತದೆ. ಆಗ ಪೂಜಿಸಲ್ಪಡುವದು ಯಾವ ಮೂರ್ತಿಯೇ ಆಗಲಿ, ಭಗವಂತನು ಆವಿರ್ಭವಿಸಿ ಭಕ್ತರನ್ನು ಅನುಗ್ರಹಿಸುತ್ತಾನೆ. ತಿರುಮಲ ತಿರುಪತಿಯ ಶ್ರೀವೇಂಕಟೇಶ್ವರನ ವಿಗ್ರಹವು ಇದಕ್ಕೆ ನಿದರ್ಶನವಲ್ಲವೇ?
ಆಕರಗಳು:
೧. ತಿರುಪತಿ ಬಾಲಾಜಿ ವಾಸ್ ಎ ಬುದ್ಧಿಸ್ಟ ಶ್ರೈನ್ – ಕೆ. ಜಮನಾದಾಸ
೨. ’ಸಾರ್ಥ’ ಕಾದಂಬರಿ - ಎಸ್. ಎಲ್. ಭೈರಪ್ಪ
೩. ತಿರುಮಲ – ತಿರುಪತಿ ದೇವಸ್ಥಾನದ ಅಂತರ್ಜಾಲ ತಾಣ
೪. ಅವಲೋಕಿತೇಶ್ವರನ ಚಿತ್ರ – ಫ್ಯಾಕ್ಟ ಇಂಡಿಯ ಸಂಸ್ಥೆಯ ಕಾಶ್ಮೀರ ಕುರಿತಾದ ಪ್ರದರ್ಶನ ಫಲಕ
೫. ತಿರುಪತಿ - ವಿಕಿಪಿಡೀಯಾ ಮುಕ್ತಮಾಹಿತಿ ಅಂತರ್ಜಾಲ ತಾಣ
೬. ರವಿಲೋಚನ ಅವರ ಬ್ಲಾಗು : ravilochanan.blogspot.com
[ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಉಲ್ಲೇಖಿಸಿರುವ ಮೂಲ ಗ್ರಂಥಗಳನ್ನು (primary source materials) ಪರಿಶೀಲಿಸಲಾಗಿಲ್ಲ ಮತ್ತು ವಿದ್ವಾಂಸರ ಅಭಿಪ್ರಾಯಗಳನ್ನಾಗಲೀ (peer review) ಪಡೆಯಲಾಗಿಲ್ಲ - ಒಟ್ಟಿನಲ್ಲಿ ಇದೊಂದು ಸಂಶೋಧನಾತ್ಮಕ ಲೇಖನವಲ್ಲ. ಈ ಲೇಖನವು ಓದುಗರಲ್ಲಿ ಶಿಲ್ಪಶಾಸ್ತ್ರ, ಧರ್ಮಶಾಸ್ತ್ರ, ಕಲೆ-ಸಂಸ್ಕೃತಿಗಳ ಕುರಿತಾಗಿ ಆಸಕ್ತಿಯನ್ನುಂಟು ಮಾಡಿದ್ದರೆ, ಲೇಖಕನ ಪ್ರಯತ್ನವು ಸಾರ್ಥಕವಾಯಿತು ಎಂದೇ ಅರ್ಥ]

Labels: ಎಸ್. ಎಲ್. ಭೈರಪ್ಪ, ತಿರುಪತಿ, ಬುದ್ಧ